×
Ad

ಶಾಸಕ ಅಂಗಾರರು ಮಾಡಿದ ಅಭಿವೃದ್ಧಿಯನ್ನು ಹೈಜಾಕ್ ಮಾಡುತ್ತಿರುವ ಕಾಂಗ್ರೆಸ್ : ಬಿಜೆಪಿ ಆರೋಪ

Update: 2018-04-03 22:06 IST

ಸುಳ್ಯ,ಎ.3: ಸುಳ್ಯ ಕ್ಷೇತ್ರದಲ್ಲಿ ಆಗಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನೂ ಶಾಸಕ ಎಸ್.ಅಂಗಾರ ಅವರು ಮಾಡಿದ್ದಾರೆ. ಆದರೆ ಸುಳ್ಯಕ್ಕಾಗಿ ಏನನ್ನೂ ಮಾಡದ ಕಾಂಗ್ರೆಸ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈಗ ಚನಾವಣಾ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಅಭಿವೃದ್ಧಿಯನ್ನು ನಾವೇ ಮಾಡಿದ್ದು ಎಂಬ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಸುಳ್ಯ ಕ್ಷೇತ್ರದ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಎ.ವಿ.ತೀರ್ಥರಾಮ ಹೇಳಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಂತಿಮೊಗರು, ಕುಮಾರಧಾರಾ ಸೇತುವೆಯ ನಿರ್ಮಾಣ ಅಂಗಾರ ಅವರ ಪ್ರಯತ್ನದಿಂದ ಆಗಿದೆ. ಬಿಜೆಪಿ ಸರ್ಕಾರ ಇದ್ದಂತಹಾ ಸಂದರ್ಭದಲ್ಲಿ ಈ ಸೇತುವೆಗಳಿಗೆ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಇದನ್ನು ನಾವೇ ಮಾಡಿದ್ದು ಎಂದು ಕಾಂಗ್ರೆಸ್‍ನವರು ಕೊಚ್ಚಿಕೊಳ್ಳುತ್ತಿದ್ದಾರೆ. ಸತ್ಯ ಏನೆಂಬುದು ಜನತೆಗೆ ಗೊತ್ತಿದೆ ಅವರು ನಿರ್ಧರಿಸಲಿ. ಸುಳ್ಯಕ್ಕೆ ಲೋಕೋಪಯೋಗಿ ಉಪವಿಭಾಗ ಮಂಜೂರು ಮಾಡಿಸಿಕೊಂಡು ಸುಳ್ಯದ ಎಲ್ಲಾ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಿರುವುದು ಶಾಸಕರ ಸಾಧನೆ. ಹಲವಾರು ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ತಾಲೂಕಿನ ಎಲ್ಲಾ ಗ್ರಾಮಗಳಿಗೂ ರಸ್ತೆ ಸಂಪರ್ಕವನ್ನು ಕಲ್ಪಿಸಲು ಸಾಧ್ಯವಾಗಿದೆ. ಸುಳ್ಯದಲ್ಲಿ ಬಸ್ ನಿಲ್ದಾಣ ಮತ್ತು ಬಸ್ ಡಿಪ್ಪೋ ಸ್ಥಾಪನೆ ಶಾಸಕ ಎಸ್.ಅಂಗಾರ ಮತ್ತು ಉಮೇಶ್ ವಾಗ್ಲೆ ಅವರ ಪ್ರಯತ್ನದಿಂದ ಆಗಿದೆ ಎಂದರು.

ಕಡಬ ತಾಲೂಕು ಘೋಷಣೆ ಮಾಡಿದ್ದು ಬಿಜೆಪಿ ಸರ್ಕಾರ, ಆದರೆ ಬಳಿಕ ಬಂದ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷಗಳ ಕಾಲ ಏನನ್ನೂ ಮಾಡದೆ ಈಗ ಚುನಾವಣೆಗೋಸ್ಕರ ಮತ್ತೆ ತಾಲೂಕು ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಿಜವಾದ ಕಾಳಜಿ ಇರುತ್ತಿದ್ದರೆ ಕಡಬ ಈಗ ಉತ್ತಮ ತಾಲೂಕು ಕೇಂದ್ರ ಆಗುತ್ತಿತ್ತು. ಕೊಯ್ಲ ಪಶು ವೈದ್ಯಕೀಯ ಕಾಲೇಜನ್ನು ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಇದನ್ನೆಲ್ಲ ನಾವೇ ಮಾಡಿದ್ದು ಎಂದು ಕಾಂಗ್ರೆಸ್‍ನವರು ಬಿಂಬಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ತಡೆ ಮಾಡಿರುವುದು  ಮಾತ್ರ ಕಾಂಗ್ರೆಸ್‍ನ ಕೊಡುಗೆಯಾಗಿದೆ. ನಬಾರ್ಡ್, ಪಶ್ಚಿಮವಾಹಿನಿ ಯೋಜನೆಗಳಲ್ಲಿ ಬಂದ ಅನುದಾನವನ್ನು ಸುಳ್ಯಕ್ಕೆ ನೀಡದೆ ಬೇರೆಡೆಗೆ ವರ್ಗಾಯಿಸಿ ತಾರತಮ್ಯ ಮಾಡಿದ್ದಾರೆ. ನಬಾರ್ಡ್‍ನಲ್ಲಿ ಬಿಡುಗಡೆಯಾಗಿದ್ದ ಎಂಭತ್ತು ರಸ್ತೆಗಳ ಅನುದಾನವನ್ನು ತಡೆ ಮಾಡಲಾಗಿದೆ. ಸುಳ್ಯಕ್ಕೆ ಸಿಆರ್‍ಎಫ್ ಯೋಜನೆಯಡಿಯಲ್ಲಿ ಬಿಡುಗಡೆಯಾದ ರಸ್ತೆ ಕಾಮಗಾರಿಗಳ ಟೆಂಡರ್ ನಡೆಸದೆ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅರಣ್ಯ ಭೂಮಿ ನೀಡಲು ವಿಳಂಬ ಮಾಡಿ 110 ಕೆ.ವಿ.ಸಬ್‍ಸ್ಟೇಷನ್ ಕಾಮಗಾರಿ ಆಗದಂತೆ ತಡೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಮಾಧ್ಯಮ ಪ್ರಮುಖರಾದ ಮುಳಿಯ ಕೇಶವ ಭಟ್, ವಿನಯಕುಮಾರ್ ಕಂದಡ್ಕ, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಾಥ್ ಬಾಳಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News