×
Ad

​ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಶೇಣಿ ಪ್ರಶಸ್ತಿ

Update: 2018-04-03 22:17 IST

ಮಂಗಳೂರು: 'ಕವಿಭೂಷಣ ಕೆ.ಪಿ.ವೆಂಕಪ್ಪ ಶೆಟ್ಟಿ ಮತ್ತು ಶೇಣಿ ಗೋಪಾಲಕೃಷ್ಣ ಭಟ್ ಗುರು-ಶಿಷ್ಯ ಪರಂಪರೆಯ ಶ್ರೇಷ್ಠ ಮಾದರಿ. ಕುಕ್ಕುವಳ್ಳಿ ಯವರು 'ಒಡ್ಡೋಲಗ' ಗ್ರಂಥದ ಮೂಲಕ ವೆಂಕಪ್ಪ ಶೆಟ್ಟರ ಸಾಧನೆಯನ್ನು ಜೀವಂತವಿರಿಸುವುದರೊಂದಿಗೆ, ಶೇಣಿಯವರ ಒಡನಾಡಿಯಾಗಿ ನೂರಾರು ತಾಳಮದ್ದಳೆಗಳಲ್ಲಿ ಭಾಗವಹಿಸಿದ ಭಾಗ್ಯಶಾಲಿ. ಪ್ರಶಸ್ತಿ ಸಹಜವಾಗಿ ಬಂದಿದೆ. ಆದರೆ ಅಂತಹ ಹಿರಿಯರ ಹೆಸರಿನ ಗೌರವವನ್ನು ತಲ್ಲಂಗಡಿ  ಬೀಡಿನ ಮನೆಯಂಗಳದಲ್ಲಿ ಅವರು ಸ್ವೀಕರಿಸುತ್ತಿರುವುದು ಯೋಗಾಯೋಗ' ಎಂದು ಯಕ್ಷಗಾನ ವಿದ್ವಾಂಸ ಮತ್ತು ಹಿರಿಯ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.

ಸುರತ್ಕಲ್ ನ ಶೇಣಿ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ 'ಶೇಣಿ ಶತಮಾನೋತ್ಸವ' ಸರಣಿಯ 98 ನೇ ಕಾರ್ಯಕ್ರಮವಾಗಿ ದೇರಳಕಟ್ಟೆ ರೆಂಜಾಡಿಯ ತಲ್ಲಂಗಡಿ ಬೀಡು ಮನೆಯಲ್ಲಿ ಖ್ಯಾತ ಅರ್ಥಧಾರಿ ಮತ್ತು ಸಂಘಟಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ 'ಶೇಣಿ ಪ್ರಶಸ್ತಿ ಪ್ರದಾನ' ಮಾಡಿದ ಸಭೆಯಲ್ಲಿ ಅವರು ಶುಭಾಶಂಸನೆಗೈದು ಮಾತನಾಡಿದರು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ದೇರಳಕಟ್ಟೆ ತಲ್ಲಂಗಡಿ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಜರಗಿದ ಸಮಾರಂಭದಲ್ಲಿ ತಲ್ಲಂಗಡಿ ಮನೆತನದ ಗಣೇಶ ಕಾವ ಕವಿಭೂಷಣ ಕೆ.ಪಿ.ವೆಂಕಪ್ಪ ಶೆಟ್ಟಿ( ಪಕೀರ ಶೆಟ್ಟಿ) ಅವರ ವ್ಯಕ್ತಿತ್ವವನ್ನು ನೆನಪಿಸಿ, ನುಡಿನಮನ ಸಲ್ಲಿಸಿದರು. ಕಾರ್ಯಕ್ರಮ ಸಂಯೋಜಿಸಿದ ಶೇಣಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಪಿ.ವಿ.ರಾವ್ ದಿ.ಶೇಣಿಯವರ ಸಂಸ್ಮರಣೆ ಮಾಡಿದರು. ಯಕ್ಷಗಾನ ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಅಭಿನಂದನಾ ಭಾಷಣ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿದರು.

ತಲ್ಲಂಗಡಿ ಬೀಡಿನ ಹಿರಿಯರಾದ ಶ್ಯಾಮ ಸುಂದರ ಶೇಖ, ಡಾ.ಜಯರಾಮ ಮುದ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಕವಿಭೂಷಣ ವೆಂಕಪ್ಪ ಶೆಟ್ಟರ ಪ್ರಸಂಗವನ್ನಾಧರಿಸಿದ 'ಸಾಹಸ ಭೀಮ ವಿಜಯ' ಯಕ್ಷಗಾನ ತಾಳಮದ್ದಳೆ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News