×
Ad

ಮೀಸಲಾತಿ ನೀತಿ ಬದಲಾವಣೆ ಚಿಂತನೆ ಇಲ್ಲ: ರಾಜ್ ನಾಥ್ ಸಿಂಗ್

Update: 2018-04-03 22:51 IST

ಹೊಸದಿಲ್ಲಿ, ಎ. 3: ದಲಿತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ನೀತಿ ಬದಲಾವಣೆ ಚಿಂತನೆ ಇಲ್ಲ ಎಂದು ಬುಧವಾರ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ಸ್ಪಷ್ಟನೆ ನೀಡಿದ್ದಾರೆ.

ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಯಿಂದ ಕನಿಷ್ಠ 10 ಮಂದಿ ಸಾವನ್ನಪ್ಪಿದ ಒಂದು ದಿನದ ಬಳಿಕ ಸಚಿವರು ಈ ಭರವಸೆ ನೀಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ರಾಜ್ ನಾಥ್ ಸಿಂಗ್, ಮೀಸಲಾತಿ ವ್ಯವಸ್ಥೆ ರದ್ದುಗೊಳಿಸಲು ಕೇಂದ್ರ ಸರಕಾರ ಬಯಸುತ್ತಿದೆ ಎಂಬ ವದಂತಿ ತಳ್ಳಿ ಹಾಕಿದರು. ‘‘ಮೀಸಲಾತಿ ವಿರುದ್ಧ ವದಂತಿ ಹರಡುತ್ತಿದೆ. ಇದು ಸುಳ್ಳು’’ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಶಾಂತಿ ಹಾಗೂ ಪ್ರೀತಿ ಕಾಪಾಡಲು ನೆರವು ನೀಡಿ ಎಂದು ನಾನು ಎಲ್ಲ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡುತ್ತೇನೆ ಎಂದು ರಾಜನಾಥ್ ಸಿಂಗ್ ಸದನದಲ್ಲಿ ಹೇಳಿದರು.

ಲೋಕಸಭೆಯಲ್ಲಿ ಗೃಹ ಸಚಿವರು ಈ ವಿಷಯದ ಕುರಿತು ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ, ಪ್ರತಿಪಕ್ಷದ ಸಂಸದರು ಗದ್ದಲ ಎಬ್ಬಿಸಿದರು ಹಾಗೂ ‘‘ನಮಗೆ ನ್ಯಾಯ ಬೇಕು’’ ಎಂದು ಘೋಷಣೆಗಳನ್ನು ಕೂಗಿದರು. ಸುಪ್ರೀಂ ಕೋರ್ಟ್ ಮಾರ್ಚ್ 20ರ ಆದೇಶ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989 ದುರ್ಬಲಗೊಳಿಸಿದೆ ಎಂದು ಆರೋಪಿಸಿ ಪ್ರತಿಪಕ್ಷದ ಸಂಸದರು ಪ್ರತಿಭಟನೆ ನಡೆಸಿದರು. ಸರಕಾರವನ್ನು ಸಮರ್ಥಿಸಿ ಮಾತನಾಡಿದ ರಾಜನಾಥ್ ಸಿಂಗ್, ‘‘ನಾವು ಚುರುಕಾಗಿ ಕಾರ್ಯ ನಿರ್ವಹಿಸಿದ್ದೇವೆ ಹಾಗೂ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದೇವೆ’’ ಎಂದರು.

ಆದಾಗ್ಯೂ ಇದನ್ನು ಖಂಡಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಕುರಿತ ಸುಪ್ರೀಂ ಕೋರ್ಟ್‌ನ ನಿರ್ಧಾರಕ್ಕೆ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಒಪ್ಪಿಗೆ ನೀಡಿದ್ದಾರೆ ಎಂದರು. ‘‘ಕಾಯಿದೆಯನ್ನು ಈಗಾಗಲೇ ದುರ್ಬಲಗೊಳಿಸಲಾಗಿದೆ’’ ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯ ಹೇಳಿದರು ಹಾಗೂ ಈ ವಿಷಯದ ಕುರಿತು ಚರ್ಚೆ ನಡೆಸುವಂತೆ ಆಗ್ರಹಿಸಿದರು. ಈ ನಡುವೆ ಆದಷ್ಟು ಬೇಗ ಕಾವೇರಿ ನೀರು ನಿರ್ವಹಣಾ ಮಂಡಳಿ ರೂಪಿಸುವಂತೆ ಆಗ್ರಹಿಸಿ ಎಐಎಡಿಎಂಕೆ ಸದಸ್ಯರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ವೇದಿಕೆಯ ಮುಂದೆ ಸೇರಿದರು. ಸಿಂಧ್ಯಾ ಅವರು ಸರಕಾರದ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ ಅವಿಶ್ವಾಸ ಗೊತ್ತುವಳಿ ವಿಷಯವನ್ನು ಎತ್ತಿದರು.

ಈ ಸಂದರ್ಭ ಮಾತನಾಡಿದ ಮಹಾಜನ್, ಅವಿಶ್ವಾಸ ನಿರ್ಣಯ ಮುಂದುರಿಸಲು ಸಾಧ್ಯವಿಲ್ಲ ಎಂದು ಹೇಳಿದರು ಹಾಗೂ ಸದನವನ್ನು ಒಂದು ದಿನಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News