×
Ad

ಭದ್ರತೆ ಕೋರಿ ಗೃಹ ಇಲಾಖೆಗೆ ಸಚಿವ ಪ್ರಮೋದ್ ಮಧ್ವರಾಜ್ ಪತ್ರ

Update: 2018-04-04 21:55 IST

ಉಡುಪಿ, ಎ.4: ಚುನಾವಣೆಯ ಸಂದರ್ಭದಲ್ಲಿ ತನಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಕೋರಿ ಸಚಿವ ಪ್ರಮೋದ್ ಮಧ್ವರಾಜ್ ಗೃಹ ಇಲಾಖೆಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಸಚಿವರಾಗಿ ಕಾರ್ಯನಿರ್ವಹಿಸುತಿದ್ದ ಸಂದರ್ಭ ಭದ್ರತೆಗಾಗಿ ಯಾವುದೇ ಪತ್ರ ಬರೆಯದ ಪ್ರಮೋದ್, ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಸಂದರ್ಭ ದಲ್ಲಿ ತನಗೆ ಹೆಚ್ಚುವರಿ ಭದ್ರತೆಯನ್ನು ಕೋರಿ ಈ ಪತ್ರ ಬರೆದಿದ್ದಾರೆ.

ಇಂದು ಈ ಬಗ್ಗೆ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್, ಯಾವುದೇ ಅನಾಹುತ ಆಗದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಹೆಚ್ಚಿನ ಭದ್ರತೆಯನ್ನು ಕೋರಿದ್ದೇನೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಯಾವುದೇ ಅಪಾಯ ಆಗದಿರಲಿ ಎಂದು ಈ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಪತ್ರ ಬರೆದ ಬಳಿಕದ ಬೆಳವಣಿಗೆಯ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ. ಗೃಹ ಇಲಾಖೆಯಿಂದ ಯಾವುದೇ ಪತ್ರ ಬಂದಿಲ್ಲ. ಪತ್ರದಲ್ಲಿ ಅವರು ಭದ್ರತೆ ನೀಡುವುದಕ್ಕೆ ಯಾವುದೇ ಕಾರಣವನ್ನು ನಮೂದಿಸಿಲ್ಲ. ಯಾವ ರೀತಿಯ ಭದ್ರತೆ ನೀಡಬೇಕೆಂಬುದು ಇಲಾಖೆಗೆ ಬಿಟ್ಟ ವಿಚಾರ ಎಂದರು.

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಾನು ನಿಲ್ಲುತಿದ್ದು, ಈಗಲೂ ಈ ಬಗ್ಗೆ ಹರಿದಾಡುತ್ತಿರುವುದು ಗಾಳಿಸುದ್ದಿಯಷ್ಟೇ ಎಂದು ಅವರು ಸ್ಪಷ್ಟ ಪಡಿಸಿ ದರು. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಯು.ಆರ್.ಸಭಾಪತಿ ಸಹ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತನಗೆ ಹೆಚ್ಚಿನ ಭದ್ರತೆ ಕೋರಿ ಪ್ರಮೋದ್ ಅವರು ಎರಡು ದಿನಗಳ ಹಿಂದೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೂ ಈ ಕುರಿತು ಪತ್ರ ಬರೆದಿದ್ದಾರೆ ಎಂದು ಕನ್ನಡದ ವೆಬ್‌ಸೈಟೊಂದು ವರದಿ ಮಾಡಿದೆ.

ಪ್ರಮೋದ್ ಅವರಿಗೆ ಹೆಚ್ಚಿನ ಭದ್ರತೆ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಗೃಹ ಇಲಾಖೆಗೆ ಸೂಚಿಸಿ ರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಮುಂದೆ ಸಂಭವಿಸಬಹುದಾದ ಘಟನೆಗಳ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಬೇಕು ಎಂದು ಪ್ರಮೋದ್ ಪತ್ರದಲ್ಲಿ ಕೋರಿರುವುದಾಗಿಯೂ ಗೃಹ ಸಚಿವರ ಕಚೇರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವೆಬ್‌ಸೈಟ್ ತಿಳಿಸಿದೆ.

ಆದರೆ ಯಾವ ಘಟನೆ, ಯಾರಿಂದ ಬೆದರಿಕೆ ಇದೆ ಎಂಬ ವಿವರಗಳನ್ನು ಪತ್ರದಲ್ಲಿ ನೀಡಲಾಗಿಲ್ಲ ಅದು ಹೇಳಿದೆ. ಕಳೆದ ಹಲವು ತಿಂಗಳುಗಳಿಂದ ಬಿಜೆಪಿ ಸೇರ್ಪಡೆಗೊಳ್ಳುವ ಸಚಿವ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಈ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದ್ದರು. ಪಕ್ಷ ಸೇರುವ ಬಗ್ಗೆ ಅವರ ಮೇಲೆ ಬಿಜೆಪಿಯಿಂದಲೂ ತೀವ್ರವಾದ ಒತ್ತಡ ಬಂದಿತ್ತು ಎಂಬ ವದಂತಿಗಳೂ ಹರಿದಾಡುತಿದ್ದವು.

ಬೆದರಿಕೆ, ಜೀವಭಯ ಇರುವ ವ್ಯಕ್ತಿಗಳಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಗುಪ್ತಚರ ವಿಭಾಗದಲ್ಲಿ ಪ್ರತ್ಯೇಕ ಸಮಿತಿ ಇದ್ದು, ಭದ್ರತೆ ಒದಗಿಸುವ ಬಗ್ಗೆ ಈ ಸಮಿತಿಯೇ ಅಂತಿಮ ನಿರ್ಣಯ ಕೈಗೊಳ್ಳಲಿದೆ. ಸಚಿವರು, ಚುನಾಯಿತ ಜನಪ್ರತಿನಿಧಿಗಳು ತಮಗೆ ಬೆದರಿಕೆ ಇರುವ ಬಗ್ಗೆ ನಿರ್ದಿಷ್ಟ ಮಾಹಿತಿ, ವಿವರ ನೀಡಿದರೆ ಮಾತ್ರ ಭದ್ರತೆ ಒದಗಿಸಲಾಗುತ್ತದೆ. ಆದರೂ ಪ್ರಮೋದ್ ಬರೆದಿರುವ ಪತ್ರವನ್ನು ಇಲಾಖೆ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ವೆಬ್‌ಸೈಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News