ಬೆಳ್ತಂಗಡಿ: ಬಾಂಜಾರು ಮಲೆ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧಾರ

Update: 2018-04-04 17:42 GMT

ಬೆಳ್ತಂಗಡಿ, ಎ. 4: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಇನ್ನು ತಾಲೂಕಿನ ಮೂಲನಿವಾಸಿಗಳಿರುವ ಬಾಂಜಾರು ಮಲೆ ಪ್ರದೇಶದಲ್ಲಿ ಮೂಲ ಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಒದಗಿಸುವವರೆಗೂ ಮತದಾನ ಮಾಡದಿರುವ ನಿರ್ಧಾರಕ್ಕೆ ಇಲ್ಲಿನ ಜನರು ಬಂದಿದ್ದು, ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಲಿದ್ದಾರೆ.

ನೆರಿಯ ಗ್ರಾಮದ ಬಾಂಜಾರು ಮಲೆ ಪ್ರದೇಶದಲ್ಲಿ ಮಲೆಕುಡಿಯ ಸಮುದಾಯಕ್ಕೆ ಸೇರಿದ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಹೊರ ಪ್ರಪಂಚದೊಂದಿಗೆ ಸಂಪರ್ಕ ಪಡೆಯಬೇಕಾದಲ್ಲಿ ಸುಮಾರು 20 ಕಿ.ಮೀ. ಸುತ್ತಿ ಬಳಸಿ ಹೋಗಬೇಕು. ಚಾರ್ಮಾಡಿ ಘಾಟಿಯ 9 ನೇ ತಿರುವಿನಿಂದ ಸುಮಾರು 6 ಕಿ.ಮೀ. ಕಡಿದಾದ ಕಚ್ಛಾರಸ್ತೆಯಲ್ಲಿ ಸಾಗಬೇಕು. ಖಾಸಗಿ ಎಸ್ಟೇಟಿನ ಮೂಲಕವೇ ಈ ರಸ್ತೆ ಹಾದು ಹೋಗುತ್ತಿದ್ದು ಖಾಸಗಿ ಜಮೀನೆಂಬ ಕಾರಣ ನೀಡಿ ರಸ್ತೆಯ ಅಭಿವೃದ್ಧಿಗೆ ಸರಕಾರಗಳು ಮುಂದಾಗುತ್ತಿಲ್ಲ. ಇಲ್ಲಿನ ಮೂಲ ನಿವಾಸಿಗಳು ಇನ್ನೂ ವಿದ್ಯುತ್ ಸಂಪರ್ಕವನ್ನೇ ಕಂಡಿಲ್ಲ. ದೂರವಾಣಿಯಂತೂ ಇವರಿಗೆ ದೂರದ ಮಾತು. ಇಲ್ಲಿನ ಮಕ್ಕಳು ಹಾಸ್ಟೇಲ್ ಸೇರಿ ವಿದ್ಯಾಭ್ಯಾಸ ಮಾಡ ಬೇಕಾಗಿದೆ. ಕೃಷಿ ಮಾಡುವುದು ಇವರಿಗೆ ಸಾಹಸದ ಕೆಲಸವೇ. ಆದರೂ ಎಲ್ಲಾ ಸಮಸ್ಯೆಗಳ ನಡುವೆ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಈ ಜನರ ಸುಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯ ಮರೀಚಿಕೆ ಆಗಿಯೇ ಉಳಿದಿದೆ. ನಮ್ಮ ಸಮಸ್ಯೆಯನ್ನು ಈಡೇರಿಸುವ ವರೆಗೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ. ಪ್ರತಿ ಬಾರಿಯೂ ಚುನಾವಣೆ ಬಂದಾಗ ಪ್ರತಿಯೊಂದು ಪಕ್ಷದವರು ಭರವಸೆ ನೀಡಿ ಹೋಗುತ್ತಾರೆ. ಆದರೆ ಯಾವ ಸೌಕರ್ಯವನ್ನು ಈಡೇರಿಸಿಕೊಡುತ್ತಿಲ್ಲ. ಗ್ರಾಮಸ್ಥರು ಮಾಡಿಕೊಂಡ ಮನವಿಗಳಿಗೆ ಲೆಕ್ಕವಿಲ್ಲ. ರಸ್ತೆಗೆ ಅನುದಾನ ಬಿಡುಗಡೆ ಆಗಿದೆ ಎಂದು ಹೇಳುತ್ತಾರೆ. ಅದರ ಕಾಮಗಾರಿಯೂ ಪೂರ್ಣಗೊಂಡಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸುವ ವರೆಗೆ ನಾವು ಮತದಾನ ಮಾಡುವುದಿಲ್ಲ. ಭರವಸೆ ಮಾತುಗಳು ಬೇಡ. ಪೊಳ್ಳು ಭರವಸೆ ಬಗ್ಗುವುದಿಲ್ಲ ಎಂದು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News