×
Ad

ಉಳ್ಳಾಲ ದರ್ಗಾ ಆಡಳಿತ ಸಮಿತಿ ವಿರುದ್ಧ ಪ್ರತಿಭಟನೆ

Update: 2018-04-06 18:18 IST

ಮಂಗಳೂರು, ಎ.6: ಉಳ್ಳಾಲ ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಮತ್ತು ಕೇಂದ್ರ ಜುಮಾ ಮಸೀದಿಯ ಹಾಲಿ ಆಡಳಿತ ಸಮಿತಿಯ ವಿರುದ್ಧ ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ವತಿಯಿಂದ ಶುಕ್ರವಾರ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷ ಹಾಜಿ ಯು.ಎಸ್. ಹಂಝ, ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಗೊಂಡಿರುವ ಉಳ್ಳಾಲ ದರ್ಗಾ ಆಡಳಿತವು ವಕ್ಫ್ ಮಂಡಳಿ ರೂಪಿಸಿದ ನಿಯಮಾವಳಿಗಳನ್ನು ಉಲ್ಲಂಘಿಸಿದೆ. ರಾಜ್ಯ ಸರಕಾರ ಮದ್ರಸ ಸಿಲೆಬಸ್‌ಗೆ ಸಂಬಂಧಪಟ್ಟಂತೆ ಹೊರಡಿಸಿದ ಸುತ್ತೋಲೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಹೊರಡಿಸಿದ ಆದೇಶಗಳನ್ನು ಕೂಡ ಆಡಳಿತ ಸಮಿತಿ ತಿರಸ್ಕರಿಸಿದೆ. ಕಳೆದ ಹಲವು ತಿಂಗಳಿನಿಂದ ದರ್ಗಾದ ಅಧೀನದಲ್ಲಿರುವ ಕೆಲವು ಮದ್ರಸಗಳ ಅಧ್ಯಾಪಕರ ಸುಮಾರು 50 ಲಕ್ಷ ರೂ.ನಷ್ಟು ಮಾಸಿಕ ವೇತನವನ್ನು ತಡೆ ಹಿಡಿದಿದೆ ಎಂದರು.

ಸೈಯದ್ ಮದನಿ ದರ್ಗಾ ಮತ್ತು ಮಸೀದಿಯ ಖಾಝಿ ಸೈಯದ್ ಕೂರತ್ ತಂಙಳ್ ಅವರಿಗೆ ಆಡಳಿತ ಕಮಿಟಿಯು ಅಗೌರವ ತೋರುತ್ತಿದೆ. ಖಾಝಿ ತೀರ್ಮಾನಕ್ಕೆ ವಿರುದ್ಧವಾಗಿ ವರ್ತಿಸುತ್ತಿವೆ ಎಂದು ಹಾಜಿ ಯು.ಎಸ್.ಹಂಝ ಆರೋಪಿಸಿದರು.

ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪಟ್ಲ ಜುಮಾ ಮಸೀದಿಯ ಖತೀಬ್ ಎಂ.ಸಿ. ಮುಹಮ್ಮದ್ ಫೈಝಿ ಮೊಹಲ್ಲಾಗಳು ಅಂಗೀಕರಿಸಿದ ಖಾಝಿಗೆ ಅಗೌರವ ತೋರುವುದು ನ್ಯಾಯೋಚಿತವಲ್ಲ. ಅವರ ಅನುಪಸ್ಥಿತಿಯಲ್ಲಿ ಸನದುದಾನ ಕಾರ್ಯಕ್ರಮ ನಡೆಸಿರುವುದು ಮತ್ತು ಖಾಝಿಯ ಒಪ್ಪಿಗೆ ಇಲ್ಲದೆ ಸಹಾಯಕ ಖಾಝಿಯನ್ನು ನೇಮಿಸಿರುವುದು ಕೂಡ ಸರಿಯಲ್ಲ ಎಂದರು.

ಮುಖ್ಯ ಪ್ರಭಾಷಣಗೈದ ಉಳ್ಳಾಲ ಎಸ್‌ಎಂಒ ಅಧ್ಯಕ್ಷ ಪಿ.ಎಸ್. ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ ದರ್ಗಾದಲ್ಲಿ ಆಡಳಿತ ನಡೆಸುವವರು ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸುತ್ತಿದ್ದಾರೆ. ಆ ಸವಾಲವನ್ನು ನಾವು ಸ್ವೀಕರಿಸಲು ಸಿದ್ಧ ಎಂದರು.

ಅಳೇಕಲ ಜುಮಾ ಮಸೀದಿಯ ಖತೀಬ್ ಅಬೂ ಝಿಯಾದ್ ಮದನಿ ಪಟ್ಟಾಂಬಿ ದುಆಗೈದರು. ಎಸ್‌ಎಂಒ ಉಳ್ಳಾಲ ಇದರ ಸದಸ್ಯ ಅಶ್ರಫ್ ಸುಳ್ಯ ಸ್ವಾಗತಿಸಿದರು.

ಎಸ್‌ಎಂಒ ಅಧೀನದಲ್ಲಿರುವ ಮಸೀದಿಗಳ ಅಧ್ಯಕ್ಷರಾದ ಮುಹಮ್ಮದ್ ಮಕ್ಸೂದ್, ಹಾಜಿ ಯೂಸುಫ್ ಹಳೆಕೋಟೆ, ಇಬ್ರಾಹೀಂ ತೋಟ, ಮದ್ರಸ ಅಧ್ಯಾಪಕರಾದ ರಫೀಕ್, ಜಲಾಲ್ ಮದನಿ, ಹಕೀಂ ಮದನಿ, ಖಾಲಿದ್ ಮದನಿ, ಬಶೀರ್ ಸಖಾಫಿ, ಪ್ರಮುಖರಾದ ಸೀದಿಯಬ್ಬ ಸುಂದರಿ ಭಾಗ್, ಶರೀಫ್ ಅಳೇಕಲ, ಶರೀಫ್ ಸಅದಿ, ಸೈಯದ್ ಜಲಾಲ್ ತಂಙಳ್, ಹಮೀದ್ ಮಂಚಿಲ, ಮಕ್ಸೂದ್ ಮಂಚಿಲ, ಸೈಯದ್ ಖುಬೈಬ್ ತಂಙಳ್, ಅಶ್ರಫ್ ಮುಕ್ಕಚೇರಿ, ಯೂನುಸ್ ಇಮ್ದಾದ್, ಅಲ್ತಾಫ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News