×
Ad

ಹಿಮ್ಮಖವಾಗಿ ಕಾರು ಚಲಾಯಿಕೊಂಡು ಬಿ.ಸಿ.ರೋಡ್‌ಗೆ ಬಂದ ಪೂನಾ ವ್ಯಕ್ತಿ

Update: 2018-04-06 20:53 IST

ಬಂಟ್ವಾಳ, ಎ. 6: ಕೇಂದ್ರ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪೂನಾದ ಉದ್ಯಮಿ ಸಂತೋಷ್ ಎಂಬವರು ತನ್ನ ಕಾರ್‌ನ್ನು ಹಿಮ್ಮಖವಾಗಿ ಚಲಾಯಿಸುವ ಮೂಲಕ ಹೊಸ ಸಾಹಕ್ಕೆ ಕೈಹಾಕಿದ್ದಾರೆ.

ಶುಕ್ರವಾರ ಬಂಟ್ವಾಳಕ್ಕೆ ಆಗಮಿಸಿದ ವೇಳೆ ಬಿ.ಸಿ.ರೋಡ್‌ನಲ್ಲಿ ಕಾರು ಕೆಟ್ಟುಹೋಗಿದ್ದು, ಕೆಲಸಮಯ ಗ್ಯಾರೇಜ್‌ವೊಂದರಲ್ಲಿ ಕಾಲ ಕಳೆದು, ದಣಿವಾರಿಸಿ ಕೊಂಡರು. ಈ ಸಂದರ್ಭದಲ್ಲಿ ಹಿಮ್ಮುಖವಾಗಿ ಕಾರು ಚಲಾಯಿಸುವ ಸಾಹಸ ಪ್ರದರ್ಶನವನ್ನು ಕಂಡ ಬಿ.ಸಿ.ರೋಡ್‌ನ ಜನರು ಮೂಕಸ್ಮಿತರಾದರು.

ಬಿ.ಸಿ.ರೋಡ್‌ನ ಗಾಣದ ಪಡ್ಪುವಿನಲ್ಲಿರುವ ಸುಧಾಕರ್ ಎಂಬವರಿಗೆ ಸೇರಿದ ಆಟೋ ಲೈನ್ ಗ್ಯಾರೇಜ್‌ನಲ್ಲಿ ತಮ್ಮ ಕಾರನ್ನು ರಿಪೇರಿ ಮಾಡಿಸಿಕೊಂಡು ಮತ್ತೆ ಅಲ್ಲಿಂದ ಮಂಗಳೂರಿನತ್ತ ಪ್ರಯಾಣಿಸಿದರು. ಈ ನಡುವೆ ಮಾದ್ಯಮದ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಂಡು, ಪಾಕಿಸ್ತಾನ ಮತ್ತು ಭಾರತದ ಗಡಿ ವಿವಾದದ ಹಿನ್ನೆಲೆಯಲ್ಲಿ ಅನೇಕ ಸೈನಿಕರು ಪಾಕಿಸ್ತಾನದ ಜೈಲು ಪಾಲಾಗಿ, ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಜೈಲು ಪಾಲಾಗಿರುವ ಸೈನಿಕರ ಬಿಡುಗಡೆಗೆ ಒತ್ತಾಯಿಸಿ, ಕೇಂದ್ರ ಸರಕಾರ ಗಮನ ಸೆಳೆಯಲು ವಿನೂತನ ಸಾಹಸ ಪ್ರದರ್ಶನಕ್ಕೆ ಮುಂದಾಗಿದ್ದೇನೆ ಎಂದರು.

ಜ. 10ರಿಂದ ಪೂನಾದಿಂದ ಈ ಅಭಿಯಾನ ಪ್ರಾರಂಭ ಮಾಡಿದ್ದೇನೆ. ಈಗಾಗಲೇ ಸುಮಾರು 15,700 ಕಿ.ಮೀ. ಕ್ರಮಿಸಿದ್ದೇನೆ. ಕರ್ನಾಟಕದ ಪ್ರಮುಖ ಜಿಲ್ಲೆಯನ್ನು ಕ್ರಮಿಸಿ, ಶುಕ್ರವಾರ ದ.ಕ.ಜಿಲ್ಲೆಗೆ ಪ್ರವೇಶಿಸಿದ್ದೇನೆ. ಇನ್ನು 2 ಸಾವಿರ ಕಿ.ಮೀ.ಕ್ರಮಿಸಿದರೆ ಕರ್ನಾಟಕ ಮತ್ತು ಗೋವಾ ರಾಜ್ಯವನ್ನು ಸುತ್ತಿದಂತಾಗುತ್ತದೆ. ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಬೆಂಬಲ ಲಭಿಸಿದ್ದು, ಜನರು ಮುಕ್ತ ಕಂಠದಿಂದ ಪ್ರೋತ್ಸಾಹಿಸಿದ್ದಾರೆ ಎಂದು ಹೇಳುತ್ತಾರೆ ಸಂತೋಷ್ ಅವರು.

ಸುಮಾರು 50 ವರ್ಷ ಪ್ರಾಯದ ಸಂತೋಷ್ ಅವರು, ಪೂನಾದಲ್ಲಿ ಉದ್ಯಮಿಯಾಗಿದ್ದಾರೆ. ಇವರ ಸಾಹಸ ಪ್ರದರ್ಶನಕ್ಕೆ ಸ್ನೇಹಿತರೊಬ್ಬರು ಬೈಕಿನಲ್ಲಿ ಟ್ರಕ್ಕಿಂಗ್ ಮೂಲಕ ಸಾಥ್ ನೀಡುತ್ತಿರುವುದು ವಿಶೇಷ.
 
ಸೈನಿಕರು ಹಾಗೂ ರೈತರು ನಮ್ಮ ದೇಶದ ಬೆನ್ನೆಲುಬು. ಅವರನ್ನು ಪ್ರೋತ್ಸಾಹಿಸುವುದು ನಮ್ಮ ಧರ್ಮ. ಇದರಿಂದ ಸರಕಾರದ ಗಮನ ಸೆಳೆಯಲು ತನ್ನ ಸಣ್ಣ ಪ್ರಯತ್ನ ಅಷ್ಟೇ.

-ಸಂತೋಷ್, ಸಂಚಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News