×
Ad

ಕಾಜೂರು ಉರೂಸ್‌ಗೆ ಚಾಲನೆ

Update: 2018-04-06 21:22 IST

ಬೆಳ್ತಂಗಡಿ, ಎ. 6: ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಎಲ್ಲರೂ ಒಟ್ಟಾಗಿ ದೇವರ ಕಾರ್ಯವನ್ನು ಮಾಡಲು ಮುಂದಾಗಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ. ಮೋನು ಕಣಚೂರು ಹೇಳಿದರು.

ಅವರು ಶುಕ್ರವಾರ ಇತಿಹಾಸ ಪ್ರಸಿದ್ಧವಾದ ಕಾಜೂರು ದರ್ಗಾ ಶರೀಫ್ ಉರೂಸಿಗೆ ಚಾಲನೆ ನೀಡಿ ಮಾತನಾಡಿದರು. ಕಳೆದ ವರ್ಷಗಳಿಂದ ನಿಂತು ಹೋಗಿದ್ದ ಉರೂಸ್ ಕಾರ್ಯಕ್ರಮಕ್ಕೆ ಇದೀಗ ಮತ್ತೆ ಚಾಲನೆ ದೊರೆತಿದೆ. ಸರ್ವಧರ್ಮೀಯರ ಭಾಗವಹಿಸುವಿಕೆಯಿಂದ ಊರಿನಲ್ಲಿ ಶಾಂತಿ ನೆಮ್ಮದಿಯನ್ನು ತರುತ್ತಿದ್ದ ಉರೂಸ್ ಇದೀಗ ಮತ್ತೆ ಊರಿಗೆ ಒಳಿತನ್ನು ತರಲಿದೆ. ನಾವು ಸದಾ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಮುಂದಿನ ತಲೆ ಮಾರನ್ನಾದರೂ ಬೆಳೆಸೋಣ ಎಂದರು.

ದ.ಕ ಸುನ್ನೀ ಸಂಯುಕ್ತ ಜಮಾತಿನ ಖಾಜಿ ಅಸ್ಸಯ್ಯಿದ್ ಫಝಲ್ ಕೋಯ ತಂಙಳ್ ಕೂರತ್ ಮಾತನಾಡಿ, ನಮಗೆ ಒಳಿತನ್ನು ತರಲಿ ಎಂದು ಉರೂಸನ್ನು ಮಾಡಬೇಕಾಗಿದೆ. ದೇವರನ್ನು ಬಿಟ್ಟು ಹೋದವರು ಎಂದಿಗೂ ಉಳಿಯಲು ಸಾಧ್ಯವಿಲ್ಲ. ಮನಸ್ಸು ಒಳಿತಾಗಿದ್ದರೆ ಮಾತ್ರ ಎಲ್ಲವೂ ಸರಿಯಾಗಲು ಸಾಧ್ಯ. ಈ ಉರೂಸು ಇಡೀ ನಾಡಿಗೆ ಒಳಿತನ್ನು ತರುವಂತಾಗಲಿ ಎಂದು ಹಾರೈಸಿದರು.

ಕಾಜೂರು ಖತೀಬರಾದ ಕೆ.ಪಿ.ಎಸ್ ಝೈನುಲ್ ಅಬಿದೀನ್ ಜಮಲುಲ್ಲೈಲಿ ತಂಙಳ್ ಮದನಿ, ಕಿಲ್ಲೂರು ಮಸೀದಿಯ ಖತೀಬರಾದ ಶಿಹಾಬುದ್ದೀನ್ ಆಲ್ ಐದ್ರೋಸ್ ತಂಙಳ್ ಆಶೀರ್ವಚನ ನೀಡಿದರು.

ವಕ್ಫ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ನೆಕ್ಕರೆ ಬಾವಾ ಹಾಜಿ, ಸದಸ್ಯರಾದ ನೂರುದ್ದೀನ್ ಸಾಲ್ಮರ, ನಝೀರ್ ಮಠ, ಸುಲೈಮಾನ್, ಅಬ್ದುಲ್ ಖಾದರ್ ಬಜ್ಪೆ, ಇಕ್ಬಾಲ್ ಸಲಾಫಿ, ಮುಹಮ್ಮದ್ ಬಶೀರ್ ಕರೋಪಾಡಿ, ಮಹಮ್ಮದ್ ಕೆ.ವಿ. ಉಜಿರೆ, ಅಬ್ದುಲ್ ಶುಕೂರ್ ಉಜಿರೆ, ಎನ್.ಎ. ಮಹಮ್ಮದ್ ಮುಸ್ಲಿಯಾರ್ ಕಾಜೂರು, ಶಶಿಧರ ಗೌಡ ಬೆಡಿಗುತ್ತು, ಮೋಹನ್ ಗೌಡ ಬೆಡಿಗುತ್ತು, ರಾಜೇಶ ಗೌಡ ಪಯ್ಯೆ, ದಿನೇಶ ಗೌಡ ದಿಡುಪೆ, ಕಿಶೋರ್ ಕುಮಾರ್ ಊರ್ಜೆ, ವೆಂಕಟರಮಣ ಅಗರಿಮಾರು, ಪದ್ಮನಾಭ ಗೌಡ ಹಾಗೂ ಉರೂಸ್ ಸ್ವಾಗತ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ಬೆಡಿಗುತ್ತು ಮನೆಯವರು ತಾಮ್ರದ ದೀಪ, ಅಕ್ಕಿ ಮುಡಿ, ದೀಪದ ಎಣ್ಣೆಯನ್ನು ಹಸಿರು ಹೊರೆ ಕಾಣಿಕೆಯೊಂದಿಗೆ ಸಮರ್ಪಿಸಿದರು. ಕಾಜೂರು ದರ್ಗಾದ ವತಿಯಿಂದ ಬೆಡಿಗುತ್ತು ಮನೆಯವರನ್ನು, ಕೂರತ್ ತಂಙಳ್ ಹಾಗೂ ಯು.ಕೆ. ಮೋನು ಅವರನ್ನು ಗೌರವಿಸಿದರು.

ಕಾಜೂರು ದರ್ಗಾದ ಆಡಳಿತಾಧಿಕಾರಿ ಮುಹಮ್ಮದ್ ರಫಿ ಸ್ವಾಗತಿಸಿದರು. ಡಿ.ಕೆ. ಅಬ್ದುಲ್ ರಶೀದ್ ಮದನಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News