×
Ad

ಮೂರು ದೇವಸ್ಥಾನಗಳಿಗೆ ಕನ್ನ: 13ಲಕ್ಷ ರೂ. ಮೌಲ್ಯದ ಸೊತ್ತು ಕಳವು

Update: 2018-04-06 22:37 IST

ಉಡುಪಿ, ಎ.6: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹಾವಂಜೆ ಗ್ರಾಮದ ಕೀಳಂಜೆಯ ಎರಡು ಹಾಗೂ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪುಂದ ಗ್ರಾಮದ ಒಂದು ದೇವಸ್ಥಾನಗಳಿಗೆ ಎ.5ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಉಪ್ಪುಂದ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಗರ್ಭಗುಡಿಯ ಹೊರ ಗಿನ ಬಾಗಿಲು ಹಾಗೂ ಗರ್ಭಗುಡಿಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಗರ್ಭಗುಡಿಯಲ್ಲಿದ್ದ 28 ಕೆ.ಜಿ ತೂಕದ ಬೆಳ್ಳಿಯ ಆಭರಣ ಹಾಗೂ 61 ಗ್ರಾಂ ತೂಕದ ಚಿನ್ನದ ಆಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಬೆಳ್ಳಿ ಹಾಗೂ ಚಿನ್ನದ ಆಭರಣಗಳ ಒಟ್ಟು ಮೌಲ್ಯ 12,72,500 ರೂ. ಎಂದು ಅಂದಾಜಿಸಲಾಗಿದೆ.

ಕೀಳಂಜೆ ಶ್ರೀಮಹಾವಿಷ್ಣು ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ದೇವರ ಬೆಳ್ಳಿಯ ಮುಖವಾಡ, ಬೆಳ್ಳಿಯ ತಟ್ಟೆ ಯನ್ನು ಕಳವು ಮಾಡಿದ್ದಾರೆ. ನಂತರ ಅಲ್ಲೇ ಸಮೀಪ ಇರುವ ಶ್ರೀಮಹಾ ಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಬೀಗ ಮುರಿದು ನುಗ್ಗಿದ ಅವರು, ದೇವರ ಮುಖವಾಡ ಹಾಗೂ ಎರಡೂ ದೇವಸ್ಥಾನದ ಕಾಣಿಕೆ ಡಬ್ಬಿ ಒಡೆದು ಅದರಲ್ಲಿರುವ 5000 ರೂ. ಹಣವನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಳವಾದ ಸೊತ್ತುಗಳ ವೌಲ್ಯ 21,000 ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News