ದುಡ್ಡಿನ ದೌಲತ್ತಿನ ಎದುರು ನಮ್ಮದು ಮೌಲ್ಯಗಳ ಸಮರ: ಮುನೀರ್ ಕಾಟಿಪಳ್ಳ
ಮಂಗಳೂರು, ಎ. 7: ಉತ್ತರ ಕ್ಷೇತ್ರ ಕಳೆದ ಎರಡು ದಶಕಗಳಿಂದ ಸತತವಾಗಿ ಹಣದ ರಾಜಕಾರಣವನ್ನು ಕಾಣುತ್ತಿದೆ. ಡಾ. ನಾಗಪ್ಪ ಆಳ್ವ, ಸುಬ್ಬಯ್ಯ ಶೆಟ್ಟಿ, ಲೋಕಯ್ಯ ಶೆಟ್ಟರಂತಹ ಮುತ್ಸದ್ದಿಗಳ, ಜನ ನಾಯರನ್ನು ಶಾಸಕರಾಗಿ ಆರಿಸಿದ ಕ್ಷೇತ್ರ ಈಗ ವ್ಯಾಪಾರಿಗಳ, ಉದ್ದಿಮೆದಾರರ ಆಟದ ಮೈದಾನದಂತಾಗಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಸುರತ್ಕಲ್ ಸಮೀಪದ ಕಾನ ಜಂಕ್ಷನ್ ಬಳಿ ವಾರ್ಡ್ ಮಟ್ಟದ ಸಿಪಿಐಎಂ ಪಕ್ಷದ ಚುನಾವಣಾ ಸಮಿತಿ ರಚನಾ ಸಭೆಯನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು.
'ಹಣದ ಹೊಳೆ ಹರಿಯುವ ಸೂಕ್ಷ್ಮ ಕ್ಷೇತ್ರ' ಎಂದು ಚುನಾವಣಾ ಆಯೋಗವೇ ಉತ್ತರ ವಿಧಾನಸಭಾ ಕ್ಷೇತ್ರವನ್ನು ಗುರುತಿಸುವಂತಾದದ್ದು ವಿಷಾದನೀಯ. ಇದು ಕ್ಷೇತ್ರಕ್ಕೆ ತಗುಲಿದ ಕಪ್ಪು ಚುಕ್ಕೆ. ಇಂತಹ ಕೆಟ್ಟ ಪರಂಪರೆಯ ವಿರುದ್ಧ ಯುವಜನರು ಈ ಬಾರಿಯ ಚುನಾವಣೆಯಲ್ಲಿ ಆದರ್ಶವನ್ನು ಎತ್ತಿ ಹಿಡಿಯುವಂತಾಗಬೇಕು. ಜನಪರ ರಾಜಕಾರಣದ ಆದರ್ಶದ ಭಾಗವಾಗಿಯೇ ಸಿಪಿಐಎಂ ಈ ಬಾರಿ ಚುನಾವಣಾ ಕಣಕ್ಕಿಳಿಯುತ್ತಿದೆ. ನಮ್ಮದು ದುಡ್ಡಿನ ದೌಲತ್ತಿನ ಎದುರು ಮೌಲ್ಯಗಳ ಸಮರ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಸಭೆಯಲ್ಲಿ ಬಿ ಕೆ ಇಮ್ತಿಯಾಝ್, ಶ್ರೀನಿವಾಸ್, ಮಕ್ಸೂದ್, ಗಿರೀಶ್ ಕಾನ, ಕುಮಾರ್ ಆಶ್ರಯ ಕಾಲನಿ, ಜಾಯ್ ಡಿಸೋಜ, ಅಜ್ಮಲ್, ಶ್ರೀನಾಥ್ ಕುಲಾಲ್, ಬಾಬು ಮೈಂದಗುರಿ, ಇಸ್ಮಾಯಿಲ್, ಐ ಮುಹಮ್ಮದ್, ಉದಯ ಕಾನ ಮತ್ತಿತರರು ಉಪಸ್ಥಿತರಿದ್ದರು.