ಆರೋಗ್ಯ ಸಮಸ್ಯೆಗಳು ನಮ್ಮ ಮುಂದಿರುವ ದೊಡ್ಡ ಸವಾಲು: ಕಾಪಶಿ
ಉಡುಪಿ, ಎ.6: ಬಡತನ, ಅರಿವಿನ ಕೊರತೆ, ವಾತಾರಣದಲ್ಲಿನ ಬದಲಾ ವಣೆಗಳಿಂದ ಹೊಸ ಹೊಸ ಆರೋಗ್ಯ ಸಮಸ್ಯೆ ಉದ್ಭವವಾಗುತ್ತಿವೆ. ಇದು ನಮ್ಮ ಮುಂದೆ ಇರುವ ದೊಡ್ಡ ಸವಾಲು ಆಗಿದೆ. ಮುಂದಿನ ಜನಾಂಗ ಇದಕ್ಕೆ ಸಿದ್ಧರಾಗಿರಬೇಕಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಸಹಯೋಗದಲ್ಲಿ, ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ಶನಿವಾರ ಆಯೋಜಿಸಲಾದ ವಿಶ್ವ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿಂದೆ ಆರೋಗ್ಯ ಎಂಬುದು ಕೇವಲ ದೈಹಿಕ ಕಾಯಿಲೆಗಳಿಗೆ ಮಾತ್ರ ಸಂಬಂಧಿಸಿದ್ದಾಗಿತ್ತು. ಆದರೆ ಪ್ರಸ್ತುತ ಬದಲಾದ ಜೀವನ ಶೈಲಿ ಹಾಗೂ ಕಲುಷಿತ ವಾತಾವರಣದಿಂದ ಹೊಸ ರೋಗಗಳು ಬಾಧಿಸುತ್ತಿದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. ಶಿಕ್ಷಣ, ಬಡತನ, ಆರೋಗ್ಯ ಒಂದಕ್ಕೊಂದು ಪರಸ್ಪರ ಸಂಬಂಧ ಹೊಂದಿವೆ. ಶಿಕ್ಷಣದ ಕೊರತೆ ಹಾಗೂ ಬಡತನದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಮಾತನಾಡಿ, ರಾಜ್ಯದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಸಲಹೆ ಮತ್ತು ವೆಚ್ಚ ಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿನ ಎಲ್ಲಾ ಆರೋಗ್ಯ ಯೋಜನೆಗಳನ್ನು ಸುವರ್ಣ ಆರೋಗ್ಯ ಕರ್ನಾಟಕ ಎಂಬ ಒಂದೇ ಯೋಜನೆಯಡಿ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಜೆನರಿಕ್ ಕೇಂದ್ರಗಳ ಮೂಲಕ ಕಡಿಮೆ ದರದಲ್ಲಿ ಅಗತ್ಯ ಔಷಧಗಳ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವ ಸಹಾಯ ಸಂಘಗಳ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾದ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಧರ್ಮಸ್ಥಳ ಗ್ರಾಮಾ ಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಮಾಲತಿ ದಿನೇಶ್, ಮಣಿಪಾಲ ಎಂಕಾನ್‌ನ ಡಾ.ಶಶಿಧರ್, ಡಾ.ಮಾಲತಿ ನಾಯಕ್ ಉಪಸ್ಥಿತರಿದ್ದರು. ಡಾ.ಶಶಿಧರ್ ವೈ.ಎನ್. ವಂದಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಾಬಾಯಿ ಕಾರ್ಯಕ್ರಮ ನಿರೂಪಿಸಿದರು.