ಬಾಬಾಬುಡನ್‌ಗಿರಿ ತೀರ್ಪು: ನ್ಯಾಯಕ್ಕೆ ಸಂದ ಜಯ- ಪಾಪ್ಯುಲರ್ ಫ್ರಂಟ್
ಮಂಗಳೂರು, ಎ. 7: ಸುದೀರ್ಘ ಮೂರು ದಶಕಗಳ ಕಾಲ ಅತಂತ್ರ ಸ್ಥಿತಿಯಲ್ಲಿದ್ದ ಬಾಬಾಬುಡನ್‌ಗಿರಿ ವಿವಾದಕ್ಕೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ವಾಗತಿಸುತ್ತದೆ ಎಂದು ಪಿಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ತಿಳಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ರಂಜನ್ ಗಗೋಯ್, ನ್ಯಾಯಾಧೀಶ ಭಾನುಮತಿ ನೇತೃತ್ವದ ದ್ವಿಸದಸ್ಯ ಪೀಠ ಶ್ರೀಗುರು ದತ್ತಾತ್ರೇಯ - ಬಾಬಾಬುಡನ್ ದರ್ಗಾದ ಆಡಳಿತ ಉಸ್ತುವಾರಿಯನ್ನು ಶಾಖಾದ್ರಿಗೆ ವಹಿಸಿಕೊಟ್ಟಿದೆ. ಪೂಜೆ ಮತ್ತು ನಮಾಝ್ ಸೇರಿದಂತೆ ಎಲ್ಲಾ ಕಾರ್ಯಚಟುವಟಿಕೆಗಳು ಶಾಖಾದ್ರಿ ನೇತೃತ್ವದಲ್ಲಿ ನಡೆಯಬೇಕು. ಇದೊಂದು ಭಾವನಾತ್ಮಕ ವಿಷಯವಾಗಿದ್ದು ಯಾವುದೇ ಕೋಮಿಗೆ ಧಕ್ಕೆಯಾಗಬಾರದು. ಹಿಂದೂ-ಮುಸ್ಲಿಮ್ ಎರಡೂ ಧರ್ಮಗಳ ಧಾರ್ಮಿಕ ಕೆಲಸಗಳನ್ನು ಶಾಖಾದ್ರಿ ನಿರ್ವಹಿಸಬೇಕು ಎಂದು ತೀರ್ಪು ನೀಡಿದೆ. 1977ರ ಹಿಂದೆ ಶಾಖಾದ್ರಿಗಳ ನೇತೃತ್ವದಲ್ಲಿ ಉರೂಸ್ ನಡೆಯುತ್ತಿತ್ತು. ಯಾವುದೇ ರೀತಿಯ ಹೋಮ-ಹವನ ನಡೆಯುತ್ತಿರಲಿಲ್ಲ ಎಂದು ನಾಗಮೋಹನ್‌ದಾಸ್ ನೀಡಿರುವ ವರದಿಯನ್ವಯ ಸುಪ್ರೀಂಕೋರ್ಟ್, 1977ರ ಹಿಂದೆ ಅಲ್ಲಿ ನಡೆಯುತ್ತಿದ್ದ ಪೂಜಾ ವಿಧಿ ವಿಧಾನಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಸೂಚಿಸಿದೆ. ಬಾಬುಡನ್‌ಗಿರಿಯನ್ನು ದಕ್ಷಿಣದ ಅಯೋಧ್ಯೆಯನ್ನಾಗಿಸುತ್ತೇವೆ ಎಂಬ ಸಂಘಪರಿವಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಮತ್ತು ರಾಜ್ಯದ ಕೋಮು ಭಾವೈಕ್ಯವನ್ನು ಬಯಸುವ ಮಂದಿಗೆ ಸುಪ್ರೀಂಕೋರ್ಟ್ ಈ ತೀರ್ಪು ಸಂತಸವನ್ನು ತಂದಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.