×
Ad

ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಬಿಜೆಪಿ ಟಿಕೆಟ್ ನೀಡಲು ‘ಗುರು’ ಕೊಡ್ಗಿ ವಿರೋಧ

Update: 2018-04-07 22:35 IST
ಎ.ಜಿ.ಕೊಡ್ಗಿ

ಉಡುಪಿ, ಎ.7: ಕುಂದಾಪುರದ ಮೂಲ ಬಿಜೆಪಿಗರ ಕಂಗೆಣ್ಣಿಗೆ ಗುರಿಯಾಗಿರುವ ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಕ್ಕೆ ಹಾಲಾಡಿಯವರ ‘ರಾಜಕೀಯ ಗುರು’, ಹಿರಿಯ ರಾಜಕೀಯ ಮುತ್ಸದ್ದಿ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (ಎ.ಜಿ.ಕೊಡ್ಗಿ) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಆಡಳಿತಾವಧಿಯಲ್ಲಿ ಮೂರನೇ ಹಣಕಾಸು ಆಯೋಗದ ಅಧ್ಯಕ್ಷ ಬಳಿಕ ಆಯೋಗದ ವರದಿ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿದ್ದ ಎ.ಜಿ. ಕೊಡ್ಗಿ, 2014ರಲ್ಲಿ ಹಠಾತ್ತನೆ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿದ್ದರು.

ರಾಜಕೀಯವಾಗಿ ತಾನೇ ಮುಂದೆ ತಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನನಗೆ ಅಗೌರವ ತೋರಿಸಿದ್ದಾರೆ. ಅವರಿಂದ ನನಗೆ ಮಾನಸಿಕ ಹಿಂಸೆಯಾಗಿದೆ. ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಅವರಿಗೆ ಈ ಬಾರಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದರೆ ತಾನು ಚುನಾವಣಾ ಪ್ರಚಾರದಿಂದ ದೂರವಿರುತ್ತೇನೆ. ಅವರಿಗೆ ಟಿಕೆಟ್ ನೀಡುವುದಕ್ಕೆ ನನ್ನ ಬೆಂಬಲವಿಲ್ಲ ಎಂದು ಎರಡು ದಿನಗಳ ಹಿಂದೆ ಅಮಾಸೆಬೈಲಿನಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಕೊಡ್ಗಿ ಹೇಳಿದ್ದರು.

1993ರಲ್ಲಿ ತಾನು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಾಗ, ನನ್ನೊಂದಿಗೆ ಬಂದವರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೂ ಒಬ್ಬರು. 1994ರಲ್ಲಿ ತಾನು ಕುಂದಾಪುರದಲ್ಲಿ ಚುನಾವಣೆಗೆ ನಿಂತು ಸೋತ ಬಳಿಕ, ಚುನಾವಣೆಗೆ ಮತ್ತೆ ನಿಲ್ಲದೇ, ಹಾಲಾಡಿ ಅವರೇ ಚುನಾವಣೆಗೆ ನಿಂತು ಸತತವಾಗಿ ಗೆಲ್ಲುವಲ್ಲಿ ತನ್ನೆಲ್ಲಾ ಪರಿಶ್ರಮವನ್ನು ಧಾರೆ ಎರೆದಿದ್ದೆ. ಚುನಾವಣಾ ವೆಚ್ಚಕ್ಕಾಗಿ ಹಣವನ್ನು ಸಂಗ್ರಹಿಸಿ ನೀಡಿದ್ದೆ. ಇವೆಲ್ಲವನ್ನೂ ಅವರು ಈಗ ಮರೆತುಬಿಟ್ಟಿದ್ದಾರೆ. ನನ್ನನ್ನು ಅಪಮಾನಿಸುವ ರೀತಿಯಲ್ಲಿ, ನನ್ನ ಮನಸ್ಸಿಗೆ ನೋವಾಗುವ ರೀತಿ, ಮಾನಸಿಕ ಹಿಂಸೆಯಾಗುವ ರೀತಿ ಮಾತನಾಡುತಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ, ಹಾಲಾಡಿ ಸಚಿವರಾಗುವ ಅವಕಾಶ ತಪ್ಪಲು, ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಲು ನಾನು ಕಾರಣ ಎಂದು ಅವರು ಆರೋಪಿಸಿದರು. ಇದು ನನಗೆ ಅತೀವ ನೋವು ನೀಡಿದೆ. ಅವರ ಆರೋಪ, ಅವರು ತೋರಿದ ಅಗೌರವಗಳಿಂದ ಮನನೊಂದು ನಾನು ಸಕ್ರಿಯ ರಾಜಕೀಯದಿಂದಲೇ ದೂರವಾಗಲು ಬಯಸಿದೆ. ಇಲ್ಲದಿದ್ದರೆ ನಾನು ಈಗಲೂ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುತಿದ್ದೆ. ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಬಹಳಷ್ಟು ಮಂದಿ ನನ್ನನ್ನು ಗೌರವದಿಂದ ಕಾಣುತ್ತಾರೆ. ಇಂಥ ಗೌರವ ಹಾಲಾಡಿ ಅವರಿಗೂ ಇರಬೇಕಾಗಿತ್ತು ಎಂದರು.

ಶಾಸಕರಾಗಿ ಹಾಲಾಡಿ ಅವರು ಮಾಡಿದ ಸ್ವಯಂಕೃತ ಅಪರಾಧಗಳೇ ಅವರಿಗೆ ಸಚಿವ ಸ್ಥಾನವನ್ನು ತಪ್ಪಿಸಿದವು. ಈ ಬಗ್ಗೆ ನಾನು ಮೊದಲೇ ಅವರಿಗೆ ಎಚ್ಚರಿಸಿದ್ದೆ. ಶಾಸಕರಾಗಿ ಜನರ ಮಧ್ಯೆ ಇದ್ದು ಕೆಲಸ ಮಾಡುವ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವಂತೆ ಹೇಳುತಿದ್ದೆ. ಆದರೆ ಅವರು ಅದಕ್ಕೆಲ್ಲಾ ಕಿವಿಗೊಡಲಿಲ್ಲ. ನಿಜವಾಗಿಯೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಾಡಿಗೆ ಸಚಿವ ಪದವಿ ನೀಡುವಂತೆ ನಾನು ಅಂದಿನ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿದ್ದೆ. ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಹಾಲಾಡಿಗೆ ತಪ್ಪಿ, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಿಕ್ಕಿದಾಗ, ತನಗೆ ಸಚಿವ ಪದವಿ ಕೈತಪ್ಪಲು ಕೊಡ್ಗಿಯೇ ಕಾರಣ ಎಂದು ಅಪಪ್ರಚಾರ ಮಾಡಿದರು. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಕೊಡ್ಗಿ ಹೇಳಿದರು.

ನಾನು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಅಮಾಸೆಬೈಲನ್ನು ರಾಜ್ಯಕ್ಕೆ ಮಾದರಿಯಾದ ಸಂಪೂರ್ಣ ‘ಸೋಲಾರ್ ಗ್ರಾಮ’ವಾಗಿ ಮಾಡುವಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ನೆರವಿನ ಹಸ್ತ ನೀಡಿದ್ದಾರೆ. ಆದರೆ ತನ್ನದೇ ಕ್ಷೇತ್ರದಲ್ಲಿರುವ ಅಮಾಸೆಬೈಲಿಗೆ ಹಾಲಾಡಿ ನಯಾಪೈಸೆ ಸಹಾಯ ಮಾಡಿಲ್ಲ. ಯಾವುದೇ ಕಾರ್ಯಕ್ರಮಕ್ಕೂ ಬಂದೇ ಇಲ್ಲ ಎಂದು ಕೊಡ್ಗಿ ಆರೋಪಿಸಿದರು.

ಅಮಾಸೆಬೈಲ್ ಗ್ರಾಪಂನ್ನು ಸೋಲಾರ್ ಗ್ರಾಮವಾಗಿ ಮಾಡುವಲ್ಲಿ ಮಾಡಿದ ಖರ್ಚಿನಲ್ಲಿ ಇನ್ನೂ 45 ಲಕ್ಷ ರೂ.ಗಳನ್ನು ನೀಡಬೇಕಾಗಿದೆ. ನಾನು ಮನವಿ ಮಾಡಿದಾಗ ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯರಾದ ಗಣೇಶ ಕಾರ್ಣಿಕ್, ಪ್ರತಾಪ್‌ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೈಂದೂರು ಶಾಸಕ ಗೋಪಾಲ ಪೂಜಾರಿ ಎಲ್ಲರೂ ಅನುದಾನವನ್ನು ನೀಡಿದ್ದಾರೆ. ಆದರೆ ಇದೇ ಕ್ಷೇತ್ರದ ಶಾಸಕರಾದ ಹಾಲಾಡಿ ನಯಾ ಪೈಸೆ ನೀಡಿಲ್ಲ ಎಂದರು.

ಹಾಲಾಡಿ ಅವರಿಗೆ ನನ್ನ ಮೇಲೆ ಗೌರವವಿದ್ದಿದ್ದರೆ ತಮ್ಮ ಕ್ಷೇತ್ರದ ಗ್ರಾಮದ ಸಾಧನೆಗೆ ಅನುದಾನ ನೀಡಬೇಕಿತ್ತು. ಆದರೆ ಕೊಟ್ಟಿಲ್ಲ. ಹೀಗಾಗಿ ಅವರು ಕುಂದಾಪುರದಿಂದ ಮತ್ತೆ ಸ್ಪರ್ಧಿಸುವುದಕ್ಕೆ ಸೂಕ್ತ ವ್ಯಕ್ತಿ ಎಂದು ನನಗೆ ಅನಿಸುತ್ತಿಲ್ಲ. ಹಾಲಾಡಿ ಅವರಿಗೆ ಟಿಕೆಟ್ ನೀಡದಂತೆ ನಾನು ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದೇನೆ ಎಂದರು.

ಕಳೆದ ವರ್ಷ ಹಾಲಾಡಿ ಅವರ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ನಾನೇ ಕಾರಣ ಎಂದು ಅಪಪ್ರಚಾರ ನಡೆಯಿತು. ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನಾನು ಹಾಲಾಡಿ ಅವರಿಗೆ ಪತ್ರ ಬರೆದೆ. ಆದರೆ ಅವರು ಪತ್ರವನ್ನು ಬರೆದು ಸ್ಪಷ್ಟೀಕರಣ ನೀಡಲೇ ಇಲ್ಲ. ಇದು ನನಗೆ ತುಂಬಾ ತುಂಬಾ ನೋವು ನೀಡಿತು. ಕಳೆದ ಬಾರಿ ಸಚಿವ ಸ್ಥಾನ ಸಿಗದಿದ್ದಾಗ ಪಕ್ಷಕ್ಕೆ ರಾಜಿನಾಮೆ ನೀಡದಂತೆ ಪರಿಪರಿಯಾಗಿ ಕೇಳಿಕೊಂಡೆ. ನನ್ನ ಬಳಿ ಏನನ್ನೂ ಹೇಳದೇ ಹಾರಿಹೋಗಿ ರಾಜಿನಾಮೆ ನೀಡಿದರು. ನಾನು ಬಿಜೆಪಿಗೆ ವಂಚನೆ ಮಾಡಿದೆ ಎಂದೆಲ್ಲಾ ಅಪಪ್ರಚಾರ ಮಾಡಿದರು ಎಂದು ಕೊಡ್ಗಿ ಹೇಳಿದರು.

ನಾನೀಗ ಪಕ್ಷದಲ್ಲಿ ಸಕ್ರಿಯನಾಗಿಲ್ಲ. ಆದರೂ ಪಕ್ಷದೊಳಗಿನ ಎಲ್ಲಾ ಬೆಳವಣಿಗೆಗಳೂ ನನ್ನ ಗಮನಕ್ಕೆ ಬರುತ್ತವೆ. ಕುಂದಾಪುರದಲ್ಲಿ ಪಕ್ಷ ಎರಡು ಬಣಗಳಾಗಿ ಇಬ್ಭಾಗವಾಗಿದೆ. ಹಾಲಾಡಿ ಅವರಿಗೆ ಮೂಲ ಬಿಜೆಪಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕುಂದಾಪುರದಲ್ಲಿ ಹಾಲಾಡಿ ಅವರನ್ನು ಬಿಟ್ಟು ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೇಟ್ ನೀಡಿದರೆ ಬೆಂಬಲಿಸುವಿರಾ ಎಂದಾಗ, ಹಾಲಾಡಿ ಅವರಿಗಂತೂ ನನ್ನ ಬೆಂಬಲವಿಲ್ಲ. ಉಳಿದಂತೆ ಯಾರನ್ನೇ ಆದರೂ ಬೆಂಬಲಿಸಬೇಕೆ ಎಂಬುದನ್ನು ಟಿಕೆಟ್ ಪ್ರಕಟವಾದ ಬಳಿಕ ನಿರ್ಧರಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News