ಕುಂದಾಪುರ: ಶೌಚಗುಂಡಿಗೆ ಇಳಿದ ಕಾರ್ಮಿಕ ಉಸಿರುಗಟ್ಟಿ ಮೃತ್ಯು
ಕುಂದಾಪುರ, ಎ.7: ಶೌಚಾಲಯ ಗುಂಡಿಗೆ ಇಳಿದು ಶುಚಿಗೊಳಿಸುತ್ತಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾರ್ಮಿಕರೊಬ್ಬರು ಉಸಿರುಗಟ್ಟಿ ಮೃತಪಟ್ಟ ಘಟನೆ ಕುಂದಾಪುರ ಎಂಕೋಡಿ ಎಂಬಲ್ಲಿ ಇಂದು ಸಂಜೆಯ ಸುಮಾರಿಗೆ ನಡೆದಿದೆ.
ಮೃತರನ್ನು ತೆಕ್ಕಟ್ಟೆ ಹಾಲು ಡೈರಿ ಹಿಂಭಾಗದ ನಿವಾಸಿ ಸಂದೀಪ್ (25) ಎಂದು ಗುರುತಿಸಲಾಗಿದೆ. ಈ ಸಂಬಂಧ ಮನೆ ಯಜಮಾನ ಎಂಕೋಡಿಯ ಅಬ್ದುಲ್ ಖಾದರ್ ಜಿಲಾನಿ (48) ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಖಾದರ್ ಜಿಲಾನಿ ಮನೆಯಲ್ಲಿ ಎರಡು ದಿನಗಳಲ್ಲಿ ನಡೆಯಲಿದ್ದ ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮನೆಯ ಶೌಚಾಲಯದ ಗುಂಡಿ ಶುಚಿಗೊಳಿಸುವ ಕಾರ್ಯಕ್ಕೆ ಕಾರ್ಮಿಕರನ್ನು ಕರೆಸಿದ್ದರು. ಸಂದೀಪ್ ಸೇರಿದಂತೆ ಒಟ್ಟು ಮೂವರು ಕಾರ್ಮಿಕರು ಶೌಚಾಲಯ ಗುಂಡಿ ಶುಚಿಗೊಳಿಸುತ್ತಿದ್ದು, ಇವರಲ್ಲಿ ಸಂದೀಪ್ ಆರು ಅಡಿ ಆಳದ ಗುಂಡಿಗೆ ಇಳಿದಿದ್ದರೆನ್ನಲಾಗಿದೆ. ಈ ವೇಳೆ ಸಂದೀಪ್ ಗುಂಡಿಯೊಳಗೆ ಉಸಿರು ಗಟ್ಟಿ ಅಲ್ಲೇ ಕುಸಿದು ಬಿದ್ದು ಮೃತಪಟ್ಟರೆಂದು ತಿಳಿದುಬಂದಿದೆ.
ಇದನ್ನು ಅರಿತ ಉಳಿದ ಕಾರ್ಮಿಕರು ಕೂಡಲೇ ಸಂದೀಪ್ ಅವರನ್ನು ಗುಂಡಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಸಂದೀಪ್ ಆಗಲೇ ಮೃತಪಟ್ಟಿದ್ದರು. ಈ ಬಗ್ಗೆ ಮನೆಯ ಯಜಮಾನ ಅಬ್ದುಲ್ ಖಾದರ್ ವಿರುದ್ಧ ನಿರ್ಲಕ್ಷ್ಯತನ, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಹಾಗೂ ಕೈಯಿಂದ ಮಲ ತೆಗೆಯುವ ನಿಷೇಧ ಕಾಯಿದೆಯಡಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.