×
Ad

​‘ವಿವಿ ಪ್ಯಾಟ್’ ಖಾತರಿ ಹೊರತಾಗಿಯೂ ಮೇಲ್ಮನವಿ ಸಲ್ಲಿಕೆಗೆ ಅವಕಾಶ: ಮಹೇಶ್ ಕರ್ಜಗಿ

Update: 2018-04-08 14:22 IST

ಮಂಗಳೂರು, ಎ. 8: ಇವಿಎಂ ಮೂಲಕ ಚಲಾಯಿಸಿದ ಮತದಾನದ ಬಗ್ಗೆ ವಿವಿ ಪ್ಯಾಟ್ ಮೂಲಕ ಖಾತರಿಪಡಿಸಿಕೊಳ್ಳುವ ಹೊರತಾಗಿಯೂ ಮೇಲ್ಮನವಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಅದರಂತೆ ದೂರು ಇದ್ದರೂ ಕೂಡ ಋುಜುವಾತಾದರೆ ತಕ್ಷಣ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು ಮತ್ತು ತಿರಸ್ಕೃತಗೊಂಡರೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರೂ ಆಗಿರುವ 204 ಮಂಗಳೂರು ವಿಧಾನ ಸಭಾ ಕ್ಷೇತ್ರ ಚುನಾವಣಾಧಿಕಾರಿ ಮಹೇಶ್ ಕರ್ಜಗಿ ತಿಳಿಸಿದ್ದಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ನೀತಿ ಸಂಹಿತೆ ಕುರಿತು ರವಿವಾರ ನಗರದ ಮಿನಿವಿಧಾನ ಸೌಧದಲ್ಲಿರುವ ಸಹಾಯಕ ಆಯುಕ್ತರ ಕೋರ್ಟ್ ಹಾಲ್ ಕಚೇರಿಯಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ನಡೆಸಿದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪಾರದರ್ಶಕ ಚುನಾವಣೆ ನಡೆಸುವುದು ಆಯೋಗದ ಉದ್ದೇಶವಾಗಿದೆ. ಅದಕ್ಕಾಗಿ ಎಲ್ಲ ಪಕ್ಷಗಳ ಪ್ರತಿನಿಧಿಗಳ, ಮತದಾರರ ಸಹಕಾರ ಅತ್ಯಗತ್ಯ. ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ. ಚುನಾವಣೆಗೆ ಸಂಬಂಧಿಸಿ ನಿಯುಕ್ತಿಗೊಂಡ ಅಧಿಕಾರಿ-ಸಿಬ್ಬಂದಿ ವರ್ಗ ವಿನಾ ಕಾರಣ ಯಾರಿಗೂ ಕಿರುಕುಳ ನೀಡುವುದಿಲ್ಲ. ಆದರೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.

ಇವಿಎಂ ಮತದಾನದ ಬಗ್ಗೆ ಕೆಲವರಲ್ಲಿ ಗೊಂದಲವಿದೆ. ಇದನ್ನು ಹೋಗಲಾಡಿಸುವ ಸಲುವಾಗಿ ಪ್ರಪ್ರಥಮ ಬಾರಿಗೆ ವಿವಿ ಪ್ಯಾಟ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಅಳವಡಿಸಲಾಗಿದೆ. ಆ ಮೂಲಕ ಮತದಾರರು ತಾವು ಚಲಾಯಿಸಿದ ಮತದ ಬಗ್ಗೆ ಖಾತರಿ ಪಡಿಸಲಾಗುತ್ತದೆ. ಮತದಾನ ಮಾಡಿದವರಿಗೆ ವಿವಿ ಪ್ಯಾಟ್‌ನಲ್ಲಿ 7 ಸೆಕೆಂಡ್‌ಗಳ ಕಾಲ ತಾನು ಯಾರಿಗೆ ಮತ ಚಲಾಯಿಸಿದ್ದೇನೆ ಎಂಬುದರ ಚೀಟಿ ಪ್ರದರ್ಶನಗೊಳ್ಳಲಿದೆ. ಅದರ ಹೊರತಾಗಿಯೂ ತಾನು ಚಲಾಯಿಸಿದ ಮತ ನಿರ್ದಿಷ್ಟ ಅಭ್ಯರ್ಥಿಗೆ ಚಲಾವಣೆಗೊಂಡಿಲ್ಲ ಎಂದು ಮತದಾರನಿಗೆ ಅನ್ನಿಸಿದರೆ ಆಕ್ಷೇಪಕ್ಕೆ ಅವಕಾಶವಿದೆ. ಅದಕ್ಕಾಗಿ ತಕ್ಷಣ ಪ್ರತ್ಯೇಕ ಫಾರಂನಲ್ಲಿ ಉಲ್ಲೇಖಿಸಿ ಮನವಿ ಮಾಡಬಹುದು. ತಕ್ಷಣ ಏಜೆಂಟರ ಸಮ್ಮುಖ ಖಾತರಿಪಡಿಸಲಾಗುತ್ತದೆ. ಮತದಾರನ ಆಕ್ಷೇಪಣೆಯಲ್ಲಿ ಸತ್ಯ ಕಂಡು ಬಂದರೆ ತಕ್ಷಣ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು. ಒಂದು ವೇಳೆ ಆಕ್ಷೇಪಣೆ ಸುಳ್ಳಾದರೆ ಕಾನೂನು ಕ್ರಮ ಜರಗಿಸಲಾಗುವುದು. ಗುಜರಾತ್ ಚುನಾವಣೆಯಲ್ಲಿ ಈ ರೀತಿ ಆಕ್ಷೇಪಣೆ ಸಲ್ಲಿಸಿದ ಮತದಾರನ ಆರೋಪ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಆತನಿನ್ನೂ ನ್ಯಾಯಾಂಗ ಬಂಧನದಲ್ಲಿರುವುದಾಗಿ ಮಹೇಶ್ ಕರ್ಜಗಿ ಹೇಳಿದರು.

ಧಾರ್ಮಿಕ, ಸಾಮಾಜಿಕ ಇತ್ಯಾದಿ ಸಾಂಪ್ರದಾಯಿಕ ಕಾರ್ಯಕ್ರಮ ನಡೆಸಲು ಯಾವುದೇ ಅಡ್ಡಿ ಇಲ್ಲ. ಅಲ್ಲಿ ರಾಜಕೀಯ ನೆರಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸಲಾಗುವುದು. ಪೂರ್ವಾನುಮತಿ ಪಡೆದು ನಡೆಸುವ ಚುನಾವಣಾ ಪ್ರಚಾರ ಮತ್ತಿತರ ಸಭಾ ಕಾರ್ಯಕ್ರಮಕ್ಕೆ 2 ಗಂಟೆಯ ಮುನ್ನ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ ಕಾರ್ಯಕ್ರಮದ ಸ್ಥಳದಲ್ಲಿ ಅಳವಡಿಸಬಹುದು. ಕಾರ್ಯಕ್ರಮ ಮುಗಿದ 1 ಗಂಟೆಯೊಳಗೆ ಅದನ್ನು ತೆರವುಗೊಳಿಸಬೇಕು. ರಾತ್ರಿ 10 ಗಂಟೆಯ ಬಳಿಕ ರಾಜಕೀಯ-ಪ್ರಚಾರ ಸಭಾ ಕಾರ್ಯಕ್ರಮ ನಡೆಸುವಂತಿಲ್ಲ ಎಂದರು.

ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ರಮೇಶ್ ಬೋಳಿಯಾರ್, ಮುನೀರ್ ಮುಕ್ಕಚೇರಿ, ಇಕ್ಬಾಲ್, ಮುಹಮ್ಮದ್ ಮುಕ್ಕಚೇರಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News