ಸಿರಿಯಾದ ಡೌಮ ಮೇಲೆ ಶಂಕಿತ ರಾಸಾಯನಿಕ ದಾಳಿ: ಮಹಿಳೆಯರು, ಮಕ್ಕಳು ಸೇರಿ 70 ಮಂದಿ ಮೃತ್ಯು

Update: 2018-04-08 17:43 GMT

ಬೈರೂತ್(ಲೆಬನಾನ್),ಎ.9: ಸಿರಿಯದ ಪೂರ್ವ ಘೌತ ಪ್ರಾಂತದಲ್ಲಿ ಬಂಡುಕೋರರ ವಶದಲ್ಲಿರುವ ಕಟ್ಟಕಡೆಯ ಪಟ್ಟಣವಾದ ಡೌಮದಲ್ಲಿ ನಡೆದ ಶಂಕಿತ ರಾಸಾಯನಿಕ ಅಸ್ತ್ರ ದಾಳಿಯಲ್ಲಿ ಕನಿಷ್ಠ 70 ಮಂದಿ ನಾಗರಿಕರು ಮೃತಪಟ್ಟಿದ್ದಾರೆಂದು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವವರು ತಿಳಿಸಿದ್ದಾರೆ.

ಆದಾಗ್ಯೂ ಈ ವರದಿಗಳನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲವೆಂದು ತಿಳಿದುಬಂದಿದೆ.

  ಈ ಮಧ್ಯೆ ಡೌಮದಲ್ಲಿ ಸರಕಾರಿ ಪಡೆಗಳು ದಾಳಿಯನ್ನು ನಡೆಸಿದೆಯೆಂಬ ಆರೋಪಗಳು ಕಪೋಲಕಲ್ಪಿತವೆಂದು ಸಿರಿಯ ತಿಳಿಸಿದೆ. ಡೌಮ ಪಟ್ಟಣದಲ್ಲಿ ಬಂಡುಕೋರರು ಪತನದ ಅಂಚಿಗೆ ತಲುಪಿದ್ದಾರೆ. ಹೀಗಾಗಿ ಅವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆಂದು ಅದು ಹೇಳಿದೆ.

ಸಿರಿಯ ಸರಕಾರದ ಪ್ರಮುಖ ಜೊತೆಗಾರನಾದ ರಶ್ಯ ಕೂಡಾ ಡೌಮ ಪಟ್ಟಣದಲ್ಲಿ ರಾಸಾಯನಿಕ ದಾಳಿ ನಡೆಸಲಾಗಿದೆಯೆಂಬ ವರದಿಗಳನ್ನು ಅಲ್ಲಗಳೆದಿದೆ.

 ಅಮೆರಿಕದ ವಿದೇಶಾಂಗ ಇಲಾಖೆ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ ತಾನು ಪರಿಸ್ಥಿತಿಯ ಮೇಲೆ ನಿಗಾವಿರಿಸಿರುವುದಾಗಿ ಹೇಳಿದೆ ಹಾಗೂ ಒಂದು ವೇಳೆ ಡೌಮದಲ್ಲಿ ರಾಸಾಯನಿಕ ವಸ್ತುಗಳು ಬಳಕೆಯಾಗಿದ್ದಲ್ಲಿ ಅದಕ್ಕಾಗಿ ರಶ್ಯವನ್ನು ದೂರಬೇಕಾಗುತ್ತದೆಯೆಂದು ಅದು ಹೇಳಿದೆ. ಕಳೆದ ಫೆಬ್ರವರಿಯಲ್ಲಿ ಬಂಡುಕೋರರ ಭದ್ರಕೋಟೆಯಾಗಿದ್ದ ಪೂರ್ವ ಘೌತ ಪ್ರಾಂತದ ಮೇಲೆ ಸಿರಿಯದ ಸರಕಾರಿ ಪಡೆಗಳು ದಾಳಿಯನ್ನು ಆರಂಭಿಸಿದ್ದು, ಈಗ ಬಹುತೇಕ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿವೆ ಹಲವಾರು ದಿನಗಳ ಕದನವಿರಾಮದ ಬಳಿಕ ಸಿರಿಯದ ಸರಕಾರಿ ಪಡೆಗಳು ಶುಕ್ರವಾರ ಮಧ್ಯಾಹ್ನ ದಾಳಿಯನ್ನು ಪುನಾರಂಭಿಸಿದ್ದವು. ಸರಕಾರಿ ಪಡೆಗಳು ಬಳಸಿದ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದಾಗಿ 11 ಮಂದಿ ಮೃತಪಟ್ಟಿದ್ದರು. ಇವರ ಪೈಕಿ ಒಟ್ಟು 70 ಮಂದಿ ಉಸಿರಾಟದ ತೊಂದರೆಗಳಿಗೆ ತುತ್ತಾಗಿದ್ದರು.

 ಆದಾಗ್ಯೂ ಸಿರಿಯದ ವಿದ್ಯಮಾನಗಳ ಕಣ್ಗಾವಲು ಸಂಸ್ಥೆೆಯೊಂದರ ನಿರ್ದೇಶಕರಾದ ರಮಿ ಅಬ್ದುಲ್‌ರಹಮಾನ್ ಅವರು,ಡೌಮಾ ಪಟ್ಟಣದ ಮೇಲೆ ನಡೆದ ಆಕ್ರಮಣದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸಲಾಗಿದೆಯೇ ಎಂಬುದನ್ನು ತನಗೆ ದೃಢಪಡಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.

ಡೌಮ ಪಟ್ಟಣದ ಆಸ್ಪತ್ರೆಯೊಂದಕ್ಕೆ ಕ್ಲೋರಿನ್ ಬಾಂಬ್ ಅಪ್ಪಳಿಸಿ, ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆಂದು ಡೌಮದ ವೈದ್ಯಕೀಯ ನೆರವು ಸಂಸ್ಥೆಯಾದ ಸಿರಿಯನ್ ಅಮೆರಿಕನ್ ಮೆಡಿಕಲ್ ಸೊಸೈಟಿ (ಎಸ್‌ಎಂಎಂಎಸ್) ತಿಳಿಸಿದೆ. ಆನಂತರ ನರ್ವ್ ಏಜೆಂಟ್ ಸೇರಿದಂತೆ ಮಿಶ್ರಿತ ರಾಸಾಯನಿಕಗಳನ್ನು ಬಳಸಿ ಎರಡನೆ ದಾಳಿಯನ್ನು ನಡೆಸಲಾಗಿದೆಯೆಂದು ಅದು ಆರೋಪಿಸಿದೆ. ಆಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಎಸ್‌ಎಎಂಎಸ್ ಸಂಸ್ಥೆಯ ಉಪಾಧ್ಯಕ್ಷ ಬಾಸೆಲ್ ತೆರಾಮಾನಿನಿ ಅವರು ಡೌಅದಲ್ಲಿ ನಡೆದ ರಾಸಾಯನಿಕ ದಾಳಿಗಳಲ್ಲಿ ಒಟ್ಟು 35 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. ಸಿರಿಯದ ಪಡೆಗಳ ರಾಸಾಯನಿಕ ದಾಳಿಯಲ್ಲಿ ಬಲಿಯಾದ ನಾಗರಿಕರ ಸಂಖ್ಯೆ 100ನ್ನು ದಾಟಿದೆಯೆಂದು ಡೌಮದಲ್ಲಿ ಪ್ರಬಲವಾಗಿರುವ ಬಂಡುಕೋರ ಗುಂಪಾದ ಜೈಶೆ ಅಲ್ ಇಸ್ಲಾಮ್ ಡೌಮದಲ್ಲಿ ನಡೆದಿದೆಯನ್ನಲಾದ ರಾಸಾಯನಿಕ ಅಸ್ತ್ರಗಳ ದಾಳಿಯನ್ನು ಅಮೆರಿಕದ ವಿದೇಶಾಂಗ ಇಲಾಖೆ ತೀವ್ರವಾಗಿ ಖಂಡಿಸಿದೆ. ತನ್ನದೇ ಜನರ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಸಿರಿಯ ಸರಕಾರ ವಿವಾದಾತೀತ ಕುಖ್ಯಾತಿಯನ್ನು ಹೊಂದಿದೆ ಎಂದು ಅದು ಬಣ್ಣಿಸಿದೆ.

 ಡೌಮ ಪಟ್ಟಣದಲ್ಲಿ ಕದನವಿರಾಮವನ್ನು ಏರ್ಪಡಿಸುವ ಬಗ್ಗೆ ಜೈಶೆ ಅಲ್ ಇಸ್ಲಾಮ್ ಗುಂಪು ರಶ್ಯದ ಪಡೆಗಳ ಜೊತೆ ಮಾತುಕತೆಯಲ್ಲಿ ತೊಡಗಿರುವಂತೆಯೇ ನಾಗರಿಕರು ಹಾಗೂ ಬಂಡುಕೋರರು ಸೇರಿದಂತೆ ಸಾವಿರಾರು ಜನರು ಪೂರ್ವ ಘೌತವನ್ನು ತೊರೆಯತೊಡಗಿದ್ದಾರೆ. ಆದಾಗ್ಯೂ ಜೈಶೆ ಇಸ್ಲಾಮ್ ತಾನು ಡೌಮ ಪಟ್ಟಣದಿಂದ ಹಿಂದೆ ಸರಿಯುವುದಿಲ್ಲವೆಂದು ಘೋಷಿಸಿದೆ.

2013ರಲ್ಲಿಯೂ ಘೌತ ಪ್ರದೇಶದ ಬಂಡುಕೋರರ ವಶದಲ್ಲಿರುವ ಪ್ರದೇಶಗಳ ಮೇಲೆ ಸಿರಿಯ ಪಡೆಗಳು ರಾಸಾಯನಿಕ ದಾಳಿ ನಡೆಸಿದ್ದವು.

2017ರಲ್ಲಿ ಎಪ್ರಿಲ್‌ನಲ್ಲಿ , ಸಿರಿಯದ ಸರಕಾರಿ ಪಡೆಗಳು ಬಂಡುಕೋರರ ವಶದಲ್ಲಿರುವ ಪಟ್ಟಣವಾದ ಖಾನ್ ಶೈಖೂನ್‌ನಲ್ಲಿ ಸಾರಿನ್ ಎಂಬ ನರ್ವ್ ಏಜೆಂಟನ್ನು ಬಳಸಿತ್ತೆಂದು ವಿಶ್ವಸಂಸ್ಥೆ ಹಾಗೂ ರಾಸಾಯನಿಕ ಅಸ್ತ್ರಗಳ ನಿಷೇಧಕ್ಕಾಗಿನ ಸಂಸ್ಥೆ ಆರೋಪಿಸಿದ್ದವು.

2014 ಹಾಗೂ 2015ರಲ್ಲಿಯೂ ಸಿರಿಯನ್ ಪಡೆಗಳು ಬಂಡುಕೋರರ ಮೇಲೆ ಕ್ಲೋರಿನ್ ದಾಳಿ ನಡೆಸಿರುವುದನ್ನು ದೃಢಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News