×
Ad

ಆದಿತ್ಯನಾಥ್ ನಿವಾಸದ ಮುಂದೆ ಕುಟುಂಬದ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

Update: 2018-04-08 15:13 IST

ಹೊಸದಿಲ್ಲಿ, ಎ.8: ಬಿಜೆಪಿ ಶಾಸಕನೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಮಹಿಳೆಯೊಬ್ಬರು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ನಿವಾಸದ ಮುಂದೆ ತನ್ನ ಕುಟುಂಬದ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರವಿವಾರ ನಡೆದಿದೆ.

ಉನ್ನಾವೋ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹಾಗು ಆತನ ಸಹವರ್ತಿಗಳು ಕಳೆದ ವರ್ಷ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

“ನನ್ನ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಒಂದು ವರ್ಷದಿಂದೀಚೆಗೆ ನಾನು ನ್ಯಾಯಕ್ಕಾಗಿ ಅಲೆದಾಡುತ್ತಿದ್ದೇನೆ. ಆದರೆ ನನಗೆ ಯಾರೂ ಸ್ಪಂದಿಸಿಲ್ಲ. ಅವರೆಲ್ಲರನ್ನೂ ಬಂಧಿಸುವುದನ್ನು ನಾನು ನೋಡಬೇಕು. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.

“ನಾನು ಸಿಎಂ ಆದಿತ್ಯನಾಥ್ ರನ್ನೂ ಭೇಟಿಯಾಗಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಾವು ಎಫ್ ಐಆರ್ ದಾಖಲಿಸಿದಾಗ ನಮಗೆ ಬೆದರಿಕೆಯೊಡ್ಡಲಾಯಿತು” ಎಂದವರು ಹೇಳಿದ್ದಾರೆ.

ಆದಿತ್ಯನಾಥ್ ಮನೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ವರದಿಯಾಗಿದೆ. ಕೂಡಲೇ ಅವರನ್ನು ತಡೆದ ಪೊಲೀಸರು ಕುಟುಂಬಸ್ಥರೊಂದಿಗೆ ಮಹಿಳೆಯನ್ನು ಗೌತಮ್ ಪಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News