ಕಾರು ಕೊಡಿಸುವಂತೆ ಪೀಡಿಸಿದ ಪತ್ನಿಯ ಕೊಲೆ: ದೇಹವನ್ನು ತುಂಡರಿಸಿ ಕಾಲುವೆಗೆ ಎಸೆದ ಪತಿ
ಪುತ್ತೂರು, ಎ. 8: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿ ದೇಹವನ್ನು 15 ತುಂಡು ಮಾಡಿ ಕಾಲುವೆಗೆ ಎಸೆದಿರುವ ಆಘಾತಕಾರಿ ಘಟನೆ ಹೊಸಪೇಟೆಯಲ್ಲಿ ಇತ್ತೀಚೆಗೆ ನಡೆದಿದ್ದು, ಪುತ್ತೂರು ತಾಲೂಕು ಕಾಮಣ ಗ್ರಾಮದ ಅಣವುಮೂಲೆ ಚಂದ್ರಹಾಸ (27) ಕೃತ್ಯ ನಡೆಸಿದ ಆರೋಪಿ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಭಾರತಿ (24) ಕೊಲೆಯಾದವರು.
8 ವರ್ಷಗಳ ಹಿಂದೆ ಬಳ್ಳಾರಿ ಹೊಸಪೇಟೆಯ ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿದ ಚಂದ್ರಹಾಸ ಅದೇ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಂಪಿಯ ಎಂ.ಪಿ. ಪ್ರಕಾಶ್ ನಗರದ ಭಾರತಿಯನ್ನ ಪ್ರೀತಿಸಿ ಮದುವೆಯಾಗಿದ್ದನು. ನಂತರ ತಾನೇ ಒಂದು ಬಟ್ಟೆ ಅಂಗಡಿ ಪ್ರಾರಂಭಿಸಿ ವ್ಯಾಪಾರ ಕೂಡ ಆರಂಭಿಸಿದ ಚಂದ್ರಹಾಸ ನಗರದ ಸುಣ್ಣದ ಬಟ್ಟಿ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದನು ಎಂದು ತಿಳಿದುಬಂದಿದೆ.
ಘಟನೆಯ ವಿವರ
ಫೆ. 19ರಂದು ಕಾರು ಕೊಡಿಸುವಂತೆ ಚಂದ್ರಹಾಸನಲ್ಲಿ ಪತ್ನಿ ಭಾರತಿ ಒತ್ತಾಯಿಸಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಅವರೊಳಗೆ ಜಗಳ ಶುರುವಾಯಿತು. ಈ ವೇಳೆ ಚಂದ್ರಹಾಸ ತನ್ನ ಪತ್ನಿಯ ಕಪಾಳಕ್ಕೆ ಬಲವಾಗಿ ಹೊಡೆದಿದ್ದು, ಹೊಡೆತದ ಪರಿಣಾಮ ಭಾರತಿ ತಲೆ ತಿರುಗಿ ಬಿದ್ದು ಮೃತಪಟ್ಟಿದ್ದು, ಇದರಿಂದ ಹೆದರಿದ ಚಂದ್ರಹಾಸ, ಪತ್ನಿಯ ದೇಹವನ್ನು ಹದಿನೈದು ತುಂಡು ಮಾಡಿ, ನಾಲ್ಕು ಬ್ಯಾಗ್‌ಗಳಲ್ಲಿ ತುಂಬಿ ನಗರದ ರೈಲ್ವೆ ಸ್ಟೇಶನ್ ರಸ್ತೆಯ ಎಲ್‌ಎಲ್‌ಸಿ ಕಾಲುವೆಯಲ್ಲಿ ಎಸೆದಿದ್ದ ಎಂದು ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ನಾಪತ್ತೆ ನಾಟಕವಾಡಿದ ಚಂದ್ರಹಾಸ
ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಚಂದ್ರಹಾಸ, ಆಕೆಯ ತವರು ಮನೆಯವರಿಗೂ ಸುದ್ದಿ ಮುಟ್ಟಿಸಿದ್ದ. ಎಲ್ಲರೂ ಸೇರಿ ಹುಡುಕೋಣ, ಪೊಲೀಸ್ ಠಾಣೆಗೆ ದೂರು ಕೊಡುವುದು ಬೇಡ ಎಂದು ಕುಟುಂಬದವರನ್ನು ನಂಬಿಸಿ, ಕೆಲ ದಿನಗಳ ಕಾಲ ಪತ್ನಿಯನ್ನು ಹುಡುಕಿದಂತೆ ನಟಿಸಿದ ಆತ ಬಳಿಕ ತಾನೇ ನಾಪತ್ತೆಯಾಗಿದ್ದ.
ಈ ಬಗ್ಗೆ ಅನುಮಾನಗೊಂಡ ಭಾರತಿಯ ಸಹೋದರ ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ನಾಪತ್ತೆಯಾಗಿದ್ದ ಚಂದ್ರಹಾಸನನ್ನ ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.