ಮಲ್ಪೆಯಲ್ಲಿ ಮತದಾರ ಜಾಗೃತಿಗೆ ಚಾಲನೆ ನೀಡಿದ ಶೀರೂರು ಶ್ರೀ
ಮಲ್ಪೆ, ಎ.8: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ತನಗೆ ಬಿಜೆಪಿಯ ಟಿಕೆಟ್ ದೊರೆಕುವ ನಿರೀಕ್ಷೆಯಲ್ಲಿದ್ದೇನೆ. ಒಂದು ವೇಳೆ ಅಲ್ಲಿ ಟಿಕೆಟ್ ಸಿಗದೇ ಹೋದರೆ ಪಕ್ಷೇತರನಾಗಿ ಕಣಕ್ಕಿಳಿಯುವುದು ಖಚಿತ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥರು ಸ್ಪಷ್ಟವಾಗಿ ಸಾರಿದ್ದಾರೆ.
ಕ್ಷೇತ್ರದ ಮತದಾರರಲ್ಲಿ ಜಾಗೃತಿ ಮೂಡಿಸಿ ಶೇಕಡಾವಾರು ಮತದಾನವನ್ನು ಹೆಚ್ಚಿಸುವ ಸಲುವಾಗಿ ಮಲ್ಪೆ ವಡಭಾಂಡೇಶ್ವರದ ಬಲರಾಮ ದೇವಸ್ಥಾನದಲ್ಲಿ ರವಿವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ ಶ್ರೀಗಳು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ರಾಜ್ಯದ ಯಾವ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಅಭ್ಯರ್ಥಿಗಳ ಆಯ್ಕೆಗಾಗಿ ಸರ್ವೇ ನಡೆಯುತ್ತಿದೆ. ನನಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಒಂದು ವೇಳೆ ಸಿಗದೇ ಹೋದರೆ ಹಿಂದೆ ಹೇಳಿದಂತೆ ಪಕ್ಷೇತರನ್ನಾಗಿ ಕಣಕ್ಕೆ ಇಳಿಯುತ್ತೇನೆ. ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಶೀರೂರುಶ್ರೀ ಕಡ್ಡಿ ಮುರಿದಂತೆ ಪುನರುಚ್ಚರಿಸಿದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಕುಂಠಿತಗೊಂಡಿವೆ. ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವಾಗಿದ್ದು, ಗ್ರಾಮೀಣ ಭಾಗವನ್ನು ಕೇಂದ್ರವಾಗಿರಿಸಿ ಕೊಂಡು ಪ್ರಚಾರ ನಡೆಸುತ್ತೇನೆ. ಯಾರು ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೋ ಅವರನ್ನೇ ಆಯ್ಕೆ ಮಾಡುವ ಅಗತ್ಯವೂ ಇದೆ ಎಂದರು.
ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮವಾದ ಬಳಿಕವೇ ನಾನು ಚುನಾವಣಾ ಪ್ರಚಾರಕ್ಕೆ ತೆರಳುತ್ತೇನೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ನಾನು ಚುನಾವಣಾ ಪ್ರಚಾರಕ್ಕೆ ತೆರಳುವುದು ಕಷ್ಟ. ಆದರೆ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆ ಹೆಚ್ಚಳವಾಗಬೇಕಂಬ ಉದ್ದೇಶದಿಂದ ದೇವರಿಗೆ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಹಿಂದೆಲ್ಲ ಶೇ.60-70ರಷ್ಟು ಮತದಾನವಾಗಿರುವ ಬಗ್ಗೆ ಕೇಳಿದ್ದೇನೆ. ಆದರೆ ಈ ಬಾರಿ ಚುನಾವಣೆಯಲ್ಲಿ ಶೇ.90ಕ್ಕೂ ಅಧಿಕ ಮತದಾನವಾಗಬೇಕೆನ್ನುವ ಉದ್ದೇಶ ಇಟ್ಟುಕೊಂಡಿದ್ದೇನೆ. ಜಿಲ್ಲಾಡಳಿತ ಈಗಾಗಲೇ ಈ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಅದಕ್ಕೆ ಪೂರಕವೆಂಬಂತೆ ನಾನು ಉಡುಪಿ ವಿಧಾನ ಸಭಾ ಕ್ಷೇತ್ರದ ಆಯ್ದ ಪ್ರದೇಶದಲ್ಲಿ ಜಾಗೃತಿ ಮೂಡಿಸಲಿದ್ದೇನೆ. ಇದಕ್ಕಾಗಿ ನೀಲಿ ನಕ್ಷೆ ಸಿದ್ಧವಾಗಿದ್ದು, ಚುನಾವಣಾಧಿಕಾರಿಗಳಿಗೆ ಮಾಹಿತಿ ಕೊಟ್ಟು ಸೋಮವಾರದಿಂದ ಆರಂಭಿಸುತ್ತೇನೆ ಎಂದರು.
ದೇವರಿಗೆ ಪ್ರಾರ್ಥನೆ: ಶೀರೂರು ಮಠದಿಂದ 5:15ಕ್ಕೆ ವಡಭಾಂಡೇಶ್ವರ ದೇವಳಕ್ಕೆ ಆಗಮಿಸಿದ ಶೀರೂರು ಶ್ರೀ ನೇರವಾಗಿ ದೇವಳ ಪ್ರವೇಶಿಸಿ ದೇವರ ಗರ್ಭಗುಡಿ ಹೊರಗಿನಿಂದ ಆರತಿ ಬೆಳಗಿ ಈ ಬಾರಿ ಶೇಕಡವಾರು ಮತದಾನ ಹೆಚ್ಚಳವಾಗುವಂತೆ ಪ್ರಾರ್ಥಿಸಿದರು.
ಇಂಥ ವಿಷಯಗಳಲ್ಲಿ ಮನುಷ್ಯರಿಗಿಂತ ದೇವರ ಅನುಗ್ರಹ ಅಗತ್ಯವಾಗಿ ಬೇಕಿದೆ. ಅದಕ್ಕಾಗಿಯೇ ಬಲರಾಮ ದೇವರಲ್ಲಿ ನನ್ನ ಮೊರೆ ಇಟ್ಟಿದ್ದೇನೆ. ದೇವರ ಆಶೀರ್ವಾದ ಪಡೆದು ಮುಂದೆ ನಡೆದರೆ ಎಲ್ಲವೂ ಸಾಧ್ಯ ಎಂದರು.
ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ನಿಮ್ಮ ರಾಜಕೀಯ ನಡೆಯ ಬಗ್ಗೆ ಹೊಂದಿರುವ ಮನೋಭಾವನೆಯ ಬಗ್ಗೆ ಕೇಳಿದಾಗ, ಗುರುಗಳು ಏನೇ ಹೇಳಿದ್ದರೂ ಸಂತೋಷ. ಆ ಬಗ್ಗೆ ಮಾತನಾಡುವುದಿಲ್ಲ. ಅವರು ನಮ್ಮ ದೊಡ್ಡ ಅಣ್ಣನಂತೆ. ಅವರಿಗೊಂದು ಮಣೆ ಹಾಕುತ್ತೇವೆ ಎಂದರು.
ಉಡುಪಿಯ ಅಷ್ಟ ಮಠ ಹಾಗೂ ಶ್ರೀಕೃಷ್ಣ ಮಠ ನವಗೃಹಗಳಿದ್ದಂತೆ. ಕೃಷ್ಣನ ಸನ್ನಿಧಿ ಸೂರ್ಯನಂತೆ ವಿಶೇಷ ಶಕ್ತಿ ಹೊಂದಿದೆ. ಉಳಿದಂತೆ ಗುರು, ಶುಕ್ರ, ಶನಿಗಳು ಅದರ ಸುತ್ತ ಸುತ್ತುತ್ತಾರೆ ಎಂದು ಶೀರೂರುಶ್ರೀ ಹೇಳಿದರು.
ಶೀರೂರುಶ್ರೀಗೆ ಜೆಡಿಎಸ್ ಆಹ್ವಾನ
ಶ್ರೀರೂರು ಶ್ರೀಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಅವರಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗ್ಡೆ ಕುರಿತಂತೆ ಅತೀವ ಗೌರವವಿದೆ. ಶೀರೂರುಶ್ರೀಗಳಿಗೆ ನಮ್ಮ ಪಕ್ಷದಿಂದ ಕಣಕ್ಕಿಳಿಯಲು ಆಹ್ವಾನ ಕೊಟ್ಟಿದ್ದೇವೆ. ಆದರೆ ಇಂದು ಅವರು ಬಿಜೆಪಿ ಟಿಕೆಟ್ ಸಿಗದೇ ಹೋದರೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿರುವುದು ಬೇಸರ ತಂದಿದೆ. ಆದರೂ ಅವರ ಗೆಲುವಿಗೆ ನಾವು ಶ್ರಮಿಸುತ್ತೇವೆ ಎಂದು ಜೆಡಿಯುನ ಜಿಲ್ಲಾಧ್ಯಕ್ಷ ರಾಜೀವ್ ಕೋಟ್ಯಾನ್ ತಿಳಿಸಿದ್ದಾರೆ.