ಪಿಎನ್‌ಬಿ ಹಗರಣ: ನೀರವ್ ಮೋದಿ, ಚೋಕ್ಸಿ ವಿರುದ್ಧ ಜಾಮೀನುರಹಿತ ವಾರಂಟ್

Update: 2018-04-08 16:27 GMT

ಮುಂಬೈ, ಎ.8: ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಣ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಮುಂಬೈಯ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಬ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಂಚನೆ ಪ್ರಕರಣ ಎಂದು ಹೇಳಲಾಗುತ್ತಿರುವ ಪಿಎನ್‌ಬಿ ಪ್ರಕರಣದ ತನಿಖೆಗೆ ಸಹಕರಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಮೋದಿ ಮತ್ತು ಚೋಕ್ಸಿ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲು ಸಿಬಿಐ ಮನವಿ ಮಾಡಿಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆಗೆ ಸಹಕರಿಸುವಂತೆ ನೀರವ್ ಮೋದಿ ಮತ್ತು ಚೋಕ್ಸಿಗೆ ತನಿಖಾ ತಂಡವು ಹಲವು ಬಾರಿ ಇಮೇಲ್ ಮೂಲಕ ಸಂದೇಶ ರವಾನಿಸಿತ್ತು. ಆದರೆ ಇದಕ್ಕೆ ಆರೋಪಿಗಳು ಪ್ರತಿಕ್ರಿಯೆ ನೀಡದಿರುವ ಕಾರಣ ಈಗ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ. ಇದರಿಂದ ಇಬ್ಬರು ಆರೋಪಿಗಳ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಸುಲಭವಾಗಲಿದೆ. ಸದ್ಯ ನೀರವ್ ಮೋದಿ ಹಾಂಗ್‌ಕಾಂಗ್‌ನಲ್ಲಿ ಇರುವುದಾಗಿ ಸರಕಾರ ತಿಳಿಸಿದೆ. ಹಾಗಾಗಿ ಅವರ ಬಂಧನಕ್ಕೆ ಅಲ್ಲಿನ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲಹಾಬಾದ್ ಬ್ಯಾಂಕ್‌ನ ಹಾಂಗ್‌ಕಾಂಗ್ ಶಾಖೆಯಲ್ಲಿ ವಿದೇಶಿ ವಿನಿಮಯ ವ್ಯವಹಾರಗಳನ್ನು ನಿಭಾಯಿಸುತ್ತಿರುವ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೆಟರ್ ಆಫ್ ಅಂಡರ್‌ಸ್ಟಾಂಡಿಂಗ್ ಪಡೆದು ದೇಶದ ಹಲವು ಬ್ಯಾಂಕ್‌ಗಳಿಗೆ 13,000 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಂಚಿಸಿರುವ ಆರೋಪವನ್ನು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಎದುರಿಸುತ್ತಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇಶ ತ್ಯಜಿಸಿರುವ ಈ ಜೋಡಿ ಸದ್ಯ ಯಾವುದೇ ರೀತಿಯ ವಿಚಾರಣೆಗೂ ಹಾಜರಾಗಿಲ್ಲ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News