×
Ad

ಭೂಮಿ, ಆಕಾಶ, ಸಮುದ್ರದಲ್ಲಿ ವಿಶೇಷ ಚೇತನರಿಂದ ಮತದಾನ ಅರಿವು

Update: 2018-04-08 21:59 IST

ಮಲ್ಪೆ, ಎ.8: ಮಲ್ಪೆಯ ಕಡಲ ಕಿನಾರೆಯಲ್ಲಿ ರವಿವಾರ ಸಂಜೆ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಸಮುದ್ರ ತೀರದಲ್ಲಿ, ನೆಲದ ಮೇಲೆ, ಆಗಸದಲ್ಲಿ ಹಾಗೂ ಸಮುದ್ರದಲ್ಲಿದ್ದು ರಜಾದಿನದಂದು ನೆರೆದ ಜನರಿಗೆ ಮತದಾನದ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ಇದಾಗಿತ್ತು. ಆದರೆ ಇದನ್ನು ನಡೆಸಿಕೊಟ್ಟವರು ಮಾತ್ರ ಜಿಲ್ಲೆಯ ವಿಶೇಷ ಚೇತನರು, ವಾಕ್ ಮತ್ತು ಶ್ರವಣ ದೋಷವುಳ್ಳವರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಾಕ್ ಮತ್ತು ಶ್ರವಣ ದೋಷವುಳ್ಳ ಯುವಕರು ಮತದಾನ ಜಾಗೃತಿ ಕುರಿತ ಭಿತ್ತಿಪತ್ರದೊಂದಿಗೆ ಪ್ಯಾರಾ ಸೈಕ್ಲಿಂಗ್ ಮಾಡಿದರೆ, ವಿಶೇಷ ಚೇತನರು ತಮ್ಮ ವಾಹನಗಳಿಗೆ ಮತದಾನ ಜಾಗೃತಿ ಸಾರುವ ಭಿತ್ತಿಪತ್ರಗಳನ್ನು ಅಳವಡಿಸಿಕೊಂಡು ದ್ವಿಚಕ್ರಗಳ ರ್ಯಾಲಿ ನಡೆಸಿದರು. ಅದೇ ರೀತಿ ವಿಶೇಷ ಚೇತನರು ಸಮುದ್ರದಲ್ಲಿ ದೋಣಿಯಲ್ಲಿ ಪ್ರಯಾಣಿಸಿ ಭಿತ್ತಿ ಫಲಕಗಳನ್ನು ಪ್ರದರ್ಶಿಸುವ ಮೂಲಕ ರಜಾ ದಿನವನ್ನು ಕಳೆಯಲು ಕಡಲ ಕಿನಾರೆಗೆ ಬಂದಿದ್ದ ಸಾವಿರಾರು ಮಂದಿ ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಿದರು.

ಇದೇ ವೇಳೆ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಶಿವಾನಂದ ಕಾಪಶಿ, ಇಂದು ನಡೆದ ಜಾಗೃತಿ ಆಭಿಯಾನ ಅತ್ಯಂತ ವಿಶಿಷ್ಠವಾದ ಕಾರ್ಯಕ್ರಮ. ಈ ಮೂಲಕ ಚುನಾವಣಾ ಆಯೋಗದ ಸಂದೇಶವಾದ, ಎಲ್ಲರನ್ನೂ ಒಳಗೊಂಡ, ಸುಗಮ್ಯ ನೈತಿಕ ಮತದಾನದ ಉದ್ದೇಶ ಈಡೇರಿದೆ ಎಂದರು.

ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಬಾಗವಹಿಸಬೇಕೆಂಬ ಉದ್ದೇಶ ದಿಂದ ಮತಗಟ್ಟೆಗಳಲ್ಲಿ, ಮತದಾರರಿಗೆ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಲಾಗಿದೆ. ವಿಶೇಷ ಚೇತನರಿಗಾಗಿ ರ್ಯಾಂಪ್ ಹಾಗೂ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಮನೆಗಳಲ್ಲಿ ವಿಶೇಷಚೇತನ ಮತದಾರರಿದ್ದಲ್ಲಿ ಸಹಾಯವಾಣಿ ಸಂಖ್ಯೆ: 0820-2574811ಗೆ ಮಾಹಿತಿ ನೀಡಿದಲ್ಲಿ, ಮತದಾನದ ದಿನ ಮತಗಟ್ಟೆಗೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಮತದಾರರ ಹೊಸ ನೊಂದಣಿ ಮತ್ತು ತಿದ್ದುಪಡಿಗಾಗಿ ಮಿಂಚಿನ ಮತದಾನ ಎಂಬ ಆಭಿಯಾನ ಆರಂಭಿಸಲಾಗಿತ್ತು. ಈ ಆಭಿಯಾನದಲ್ಲಿ ಹೊಸದಾಗಿ ಮತಪಟ್ಟಿಯಲ್ಲಿ ಹೆಸರು ಸೇರಿಸಲು ಬಿಟ್ಟು ಹೋಗಿದಲ್ಲಿ ಎ.14ರವರೆಗೆ ಹೆಸರು ಸೇರಿಸಲು ಅವಕಾಶವಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳುವಂತೆ ತಿಳಿಸಿದ ಕಾಪಶಿ, ಮೇ 12ರ ಮತದಾನದ ದಿನದಂದು ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್, ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣ ಇಲಾಖೆಯ ಅಧಿಕಾರಿ ನಿರಂಜನ್ ಭಟ್, ಅಶೋಕ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ಮಹೇಶ್ ಸ್ವಾಗತಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಹಾಗೂ ವಿಶೇಷ ಚೇತನರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ನಂತರ ವಿಶೇಷ ಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News