ಮಹಿಳೆಯರಿಗೆ ಸಮಾನ ಸ್ಥಾನಮಾನ ಜೆಡಿಎಸ್ ಮುಂದೆ: ಶ್ರೀಕಂಠ
ಉಡುಪಿ, ಎ. 8: ಜಿಲ್ಲಾ ಜೆಡಿಎಸ್‌ನ ಮಹಿಳಾ ಘಟಕದ ವತಿಯಿಂದ ಅಂಬಲಪಾಡಿ ಯ ಸವಿತಾ ಸಮಾಜ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಾಜಿ ಪ್ರಧಾನಿ ಮಂತ್ರಿ ಎಚ್.ಡಿ.ದೇವೇಗೌಡರ ಆಡಳಿತಾವಧಿಯಲ್ಲಿ ರಾಜಕೀಯದಲ್ಲಿ ಮಹಿಳೆಯರಿಗೂ ಸ್ಥಾನಮಾನ ಕಲ್ಪಿಸಿದ್ದು, ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಕೊಟ್ಟಿದ್ದರು. ಇದರ ಪರಿಣಾಮವೆಂಬಂತೆ ಸ್ಥಳೀಯ ಹಾಗೂ ನಗರಾಡಳಿತ ಸಂಸ್ಥೆಗಳಾದ ಗ್ರಾಪಂ, ನಗರಸಭೆ, ಪುರಸಭೆ, ನಗರಪಾಲಿಕೆ, ಪಟ್ಟಣ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ.33 ಹಾಗೂ ಹಿಂದುಳಿದ ವರ್ಗದವರಿಗೆ ಶೇ.50ರಷ್ಟು ಮೀಸಲಾತಿ ಅವಕಾಶ ದೊರಕು ವಂತಾಗಿದೆ. ಜೆಡಿಎಸ್ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ ನೀಡಿದ ಏಕೈಕ ಪಕ್ಷವೆಂದು ಶ್ರೀಕಂಠ ನುಡಿದರು.
ದೇವೇಗೌಡರಂತೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದು, ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸ ಲಾಗಿತ್ತು. ಅಲ್ಲದೇ ಕುಮಾರಸ್ವಾಮಿ ಸರಕಾರವನ್ನೇ ಜನರ ಬಳಿ ತಂದ ಮಹಾನ್ ನಾಯಕನೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರದ ನರೇಂದ್ರ ಮೋದಿ ಸರಕಾರ ಮತ್ತು ರಾಜ್ಯದ ಸಿದ್ದರಾಮಯ್ಯ ಸರಕಾರಗಳು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಸಿದ್ಧರಾಮಯ್ಯ ನೇತೃದ ಸರಕಾರ ಭ್ರಷ್ಟಾಚಾರ ಮತ್ತು ಕಮಿಷನ್ ದಂಧೆಯಲ್ಲಿ ತೊಡಗಿದೆ. ಹೀಗಾಗಿ ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆಡಳಿತದಿಂದ ಬೇಸತ್ತಿದ್ದು, ಈ ಬಾರಿ ಕರಾವಳಿಯಲ್ಲೂ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಶ್ರೀಕಂಠೇಗೌಡ ಭವಿಷ್ಯ ನುಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ರಮೀಜಾ ಬಾನು, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಸುರೇಂದ್ರ, ವಾಸುದೇವ ರಾವ್, ಶೇಖರ್ ಕೋಟ್ಯಾನ್, ಉದಯ ಹೆಗ್ಡೆ, ಜೆಡಿಎಸ್‌ನ ಅಭ್ಯರ್ಥಿಗಳಾದ ಗಂಗಾಧರ ಭಂಡಾರಿ ಬಿರ್ತಿ, ರವಿ ಶೆಟ್ಟಿ ಅಲ್ಲದೇ ಸುಧಾಕರ ಶೆಟ್ಟಿ, ದಕ್ಷತ್ ಶೆಟ್ಟಿ, ಪೂರ್ಣಿಮಾ ನಾಯಕ್, ಅಬ್ದುಲ್, ಅನಿತಾ ಶೆಟ್ಟಿ, ಗಂಗಾಧರ ಬಿರ್ತಿ, ದಿಲ್‌ಶಾದ್, ಜಯಶ್ರೀ ಕೋಟ್ಯಾನ್, ಶಬು ವಹಾಬು ಮುಂತಾದವರು ಉಪಸ್ಥಿತರಿದ್ದರು.
ಸಮಾವೇಶ ಮೇಲೆ ಹದ್ದಿನಗಣ್ಣು
ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ರಾಜಕೀಯ ಸಮಾವೇಶ ಇದಾಗಿದ್ದು, ಚುನಾವಣಾಧಿಕಾರಿಗಳು ಹಾಗೂ ಪೊಲೀಸರ ತಂಡ ಪೂರ್ಣ ಪ್ರಮಾಣದಲ್ಲಿ ಹಾಜರಿದ್ದು, ಕಾರ್ಯಕಲಾಪದ ಮೇಲೆ ಹದ್ದಿನ ಕಣ್ಣಿರಿಸಿದರು. ವೀಡಿಯೊ ಚಿತ್ರೀಕರಣ ತಂಡ ಇಡೀ ಸಮಾವೇಶದ ಚಿತ್ರೀಕರಣ ನಡೆಸಿತು.
ಹೀಗಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಕೇವಲ ಮಜ್ಜಿಗೆ ಮತ್ತು ನೀರಿಗೆ ಸಂತೃಪ್ತಿ ಪಡಬೇಕಾಯಿತು.