×
Ad

ತುಂತುರು ಮಳೆಯ ನಡುವೆ ಕರಾವಳಿ ನದಿ ತೀರದಲ್ಲಿ ಮತದಾರರ ಜಾಗೃತಿಗಾಗಿ ಜಲಥಾನ್

Update: 2018-04-08 22:15 IST

ಮಂಗಳೂರು, ಎ. 8: ದಕ್ಷಿಣ ಕನ್ನಡ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿಗಾಗಿ ಫಲ್ಗುಣಿ ನದಿ ತೀರದ ಬೋಳೂರು -ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿ ರವಿವಾರ ಸಂಜೆ ತುಂತುರು ಮಳೆಯ ನಡುವೆ ಜಲಥಾನ್ ನಡೆಯಿತು.

ಬೋಳೂರು ಜಾರಂದಾಯ ದೈವ ಸ್ಥಾನದ ಬಳಿಯಿಂದ ಸುಮಾರು 10 ಫೆರಿಬೋಟುಗಳು ಹಾಗೂ ಮೀನುಗಾರರ ದೋಣಿಗಳ ಸಹಕಾರದೊಂದಿಗೆ ನೀರಿನಲ್ಲಿ ಮತದಾರರ ಜಾಗೃತಿ ತಂಡ ಸಂಚರಿಸಿ ಸುಲ್ತಾನ್ ಬತ್ತೇರಿ ಬಳಿ ಮತದಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ತಂಡದ ಸದಸ್ಯರು ಮಾಹಿತಿ ನೀಡಿದರು.

ಮತದಾರರಿಗೆ ಮತದಾನ ಖಾತ್ರಿಪಡಿಸುವ ಹೊಸ ವಿಧಾನವನ್ನು ಪರಿಚಯಿಸಿದರು.ಬೋಳೂರು ಬಳಿ ಜಲಥಾನ್ ತಂಡದ ಸದಸ್ಯರು ಫೆರಿ ದೋಣಿ ಏರಿದಾಗ ಮೋಡಕವಿದ ವಾತವರಣವಿತ್ತು ಆದರೆ ದೋಣಿ ಹಳೆ ಬಂದರು ಬಳಿ ಸಮೀಪಿತ್ತಿದ್ದಂತೆ ತುಂತುರು ಮಳೆ ಸುರಿಯ ತೊಡಗಿತು.10 ನಿಮಿಷದಲ್ಲಿ ಮಳೆ ನಿಂತ ಬಳಿಕ ಜಲಥಾನ್‌ನ ದೋಣಿಗಳು ತಿರುಗಿ ಸುಲ್ತಾನ್ ಬತ್ತೇರಿ ಬಳಿಯ ಬೋಳೂರು ಮಹಾಜನ ಸಭಾದ ಸಹಕಾರದೊಂದಿಗೆ ನಿರ್ಮಿಸಿದ ವೇದಿಕೆಯ ಬಳಿ ಮಾಹಿತಿ ನೀಡಿದರು.

ನೈತಿಕ ತಳಹದಿಯಲ್ಲಿ ನ್ಯಾಯ ಸಮ್ಮತ ಮತದಾನ ವ್ಯವಸ್ಥೆ

ಈ ಬಾರಿ ನೈತಿಕ ತಳಹದಿಯಲ್ಲಿ ನ್ಯಾಯ ಸಮ್ಮತ ರೀತಿಯಲ್ಲಿ ಮತದಾನ ನಡೆಸಲು ಜಿಲ್ಲೆಯಲ್ಲಿ ಚುನಾವಣಾ ಆಯೋಗದಿಂದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಲಿಂಗತ್ವ ಅಲ್ಪ ಸಂಖ್ಯಾತರಿಗೆ ಮತದಾನದ ಅವಕಾಶ ಇಲ್ಲ ಎನ್ನುವ ದೂರನ್ನು ಪರಿಗಣಿಸಿ ಅವರಿಗೂ ಮತ ಚಲಾಯಿಸಲು ಅವಕಾಶ ನೀಡಲಾಗಿದೆ ಎಂದು ಮತದಾರರ ಜಾಗೃತಿ ಕಾರ್ಯಕ್ರದ ಜಲಥಾನ್ ಬಳಿಕದ ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ಜಲಥಾನ್ ಕಾರ್ಯಕ್ರಮದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್,ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಸುಶ್ಮಿತಾ ರಾವ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News