ಮೂಡುಬಿದಿರೆ: ಭಗತ್ ಸೇನೆಯಿಂದ ಉಚಿತ ಸಾಮೂಹಿಕ ವಿವಾಹ; ಸಮ್ಮಾನ
ಮೂಡುಬಿದಿರೆ, ಎ. 8: ಭಗತ್‌ಸೇನೆ ಮೂಡುಬಿದಿರೆ ನೇತೃತ್ವದಲ್ಲಿ ಸುರೇಶ್ ಶೆಟ್ಟಿ, ಹರಿಮೀನಾಕ್ಷಿ, ದೋಟ ಮಿಜಾರು ಇವರ ಸಹಕಾರ ದೊಂದಿಗೆ ರವಿವಾರ ಈಶ್ವರ ಭಟ್ ಮತ್ತು ಬಳಗದವರ ಪೌರೋಹಿತ್ಯದಲ್ಲಿ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಸ್ವರಾಜ್ಯ ಮೈದಾನದಲ್ಲಿ ಆದಿಶಕ್ತಿ ದೇವಸ್ಥಾನದ ಬಳಿ ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ರಂಗಗಳ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಜರಗಿತು.
ಪಾಲಡ್ಕ ಪೂಪಾಡಿಕಲ್ಲು ಉಮೇಶ ಆಚಾರ್ಯ-ಹೊಸ್ಮಾರ್‌ನ ಶಶಿಕಲಾ, ಮಣಿಕಂಠ ಕಾರ್ಕಳ-ಗೀತಾ ಕಾರ್ಕಳ, ಸೂರಜ್ ಮಂಗಳೂರು-ಸಮಿತಾ ಕೆಸರ್‌ಗದ್ದೆ, ಮನೋಜ ಅಲಂಗಾರ್‌ಗುಡ್ಡೆ-ಸರಿತಾ ಬಂಟಕಲ್, ಮಂಜುನಾಥ ಅಜೆಕಾರ್-ಪುಷ್ಪಾ ಮಿಜಾರ್ ವಿವಾಹಿತರಾಗಿ ದಾಂಪತ್ಯಜೀವನಕ್ಕೆ ಕಾಲಿರಿಸಿದರು. ವಧುವಿಗೆ ಒಂದೂವರೆ ಪವನಿನ ಚಿನ್ನದ ಕರಿಮಣಿ ತಾಳಿ, ಸೀರೆ, ವರನಿಗೆ ಧೋತಿ,ಶರ್ಟ್, ಶಾಲು , ಪೇಟಾ ನೀಡಲಾಗಿತ್ತು. ಮುಂಜಾನೆ 10ಗಂಟೆಗೆ ಕಾಮಧೇನು ಸಭಾಭವನದಿಂದ ಹೊರಟ ದಿಬ್ಬಣದ ಮೆರವಣಿಗೆಗೆ ಆಳ್ವಾಸ್ ಶಿಕ್ಷ ಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ, ಚೌಟರ ಅರಮನೆ ಕುಲದೀಪ್ ಚೌಟ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಚಾಲನೆ ನೀಡಿದರು. ಮುಂಬೈಯ ಉದ್ಯಮಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಸಮಾರಂಭವನ್ನು ಉದ್ಘಾಟಿಸಿದರು.
ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ‘ ಸಮಾಜದ ರಕ್ಷಣೆಗೆ ಸನ್ಯಾಸಿಗಳು, ಸಂತರು ಬೇಕು; ಅವರನ್ನು ಬೆಳೆಸಲು ಸಂಸಾರಿಗಳು ಬಲಗೊಳ್ಳಬೇಕು. ಈ ದಿಸೆಯಲ್ಲಿ ಭಗತ್ ಸೇನೆ ರಾಷ್ಟ್ರಭಕ್ತಿ, ಮಾನವೀಯತೆ ಬೆಳೆಸುವ ಚಟುವಟಿಕೆಗಳನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ತಿಳಿಸಿದರು.
ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ‘ರಕ್ತದಾನ, ನೇತ್ರದಾನ ಮತ್ತು ಇದೀಗ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುವ ಮೂಲಕ ಜನಮನವನ್ನು ಒಗ್ಗೂಡಿಸುತ್ತ ದೇಶ ಕಟ್ಟುವ ಕೆಲಸ ಭಗತ್ ಸೇನೆಯಿಂದಾಗುತ್ತಿದೆ. ನವಜೋಡಿ ಜೀವನಪರ್ಯಂತ ಒಂದಾಗಿ ಬಾಳುವ ಸಂಕಲ್ಪ ತೊಟ್ಟು ಆದರಂತೆ ನಡೆದುಕೊಳ್ಳಬೇಕಾಗಿದೆ ಎಂದರು.
ಸಮ್ಮಾನ
ಎಂ. ತುಂಗಪ್ಪ ಬಂಗೇರ (ಸಮಾಜ ಸೇವೆ), ರಾಮಚಂದ್ರ ನಾಯಕ್ ( ಮಾಜಿ ಸೈನಿಕ), ಸಬಿತಾ ಮೋನಿಸ್ (ವಿಶೇಷ ಸಾಧನೆ), ಜನಾರ್ದನ ಗೌಡ ಪುತ್ತಿಗೆ ನೆಲ್ಲಿಗುಡ್ಡೆ , ಬಡಗಮಿಜಾರು ಅರೆಮಜಲುಪಲ್ಕೆ ರಾಜು ಗೌಡ (ಕೃಷಿ) ನೆಟ್‌ಬಾಲ್ ರಾಷ್ಟ್ರೀಯ ಆಟಗಾರ ಮೂಡಬಿದಿರೆ ನಾಗರಕಟ್ಟೆ ಯ ಪ್ರಜ್ವಲ್ (ಕ್ರೀಡೆ) ಹಾಗೂ ಬೆಳ್ಳೆಚ್ಚಾರು ರಾಘವ ವೈದ್ಯ (ಶಿಕ್ಷಣ) ಇವರನ್ನು ಭಗತ್‌ಸೇನೆ ವತಿಯಿಂದ ಸಮ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರು ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಿಜಾರುಗುತ್ತು, ಶಂಕರ ರೈ ಮಿಜಾರುಗುತ್ತು, ಮೂಡಬಿದಿರೆ ಬಿಲ್ಲವರ ಸಂಘದ ಅಧ್ಯಕ್ಷ ರವೀಂದ್ರ ಸುವರ್ಣ, ಇರುವೈಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪೂವಪ್ಪ ಸಾಲಿಯಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಜಿಲ್ಲಾ ಪ್ರ. ಕಾರ್ಯದರ್ಶಿ ಸುದರ್ಶನ ಎಂ., ಜೆಡಿಎಸ್ ರಾಜ್ಯ ಕಾರ್ಯದರ್ಶಿ ದಿವಾಕರ ಶೆಟ್ಟಿ ತೋಡಾರು, ಜೆಡಿಎಸ್ ಕ್ಷೇತ್ರಾಧ್ಯಕ್ಷ ಅಶ್ವಿನ್ ಜೆ. ಪಿರೇರಾ, ಮುಂಬೈ ಮೀರಾ ಬಾಂದರ್ ಬಂಟರ ಸಂಘದ ಯೂತ್ ವಿಂಗ್ ಅಧ್ಯಕ್ಷ ಸಾಯಿ ಪೂಂಜ, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಪಂಚಾಯತ್ ಸದಸ್ಯ ಹರಿಪ್ರಸಾದ್ ಶೆಟ್ಟಿ ಮಿಜಾರು, ನ್ಯಾಯವಾದಿ ಶರತ್ ಡಿ. ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಜಯಂತಿ ಎಸ್. ಬಂಗೇರ, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ರೂಪಾ ಸಂತೋಷ್ ಶೆಟ್ಟಿ, ತೋಡಾರು ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಸಲಾಂ, ಮೂಡಬಿದಿರೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್ ಭಾಗವಹಿಸಿದ್ದರು.
ಭಗತ್ ಸೇನೆ ಸ್ಥಾಪಕಾಧ್ಯಕ್ಷ ಸುಜಿತ್ ಶೆಟ್ಟಿ, ಅಧ್ಯಕ್ಷ ಪ್ರಸಾದ್ ಆಳ್ವ, ಉಪಾಧ್ಯಕ್ಷರಾದ ದಯಾನಂದ ಆಚಾರ್ಯ, ಕಾರ್ಯದರ್ಶಿ ಅಶೋಕ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಜ್ವಲ್ ಆಚಾರ್ಯ ಸಹಿತ ಸದಸ್ಯರು, ಭಗತ್ ಸೇನೆ ವಿದ್ಯಾರ್ಥಿಘಟಕ, ಚಾಮುಂಡಿ ಬೆಟ್ಟ ಘಟಕದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಯೋಗೀಶ್ ಬೆದ್ರ ಪ್ರಸ್ತಾವನೆಗೈದರು. ಲಿಖಿತಾ ಸ್ವಾಗತಿಸಿ, ಸಂತೋಷ್ ಸಿದ್ದಕಟ್ಟೆ ನಿರೂಪಿಸಿದರು. ಪ್ರತೀಕ್ಷಾ ಶೆಟ್ಟಿ ವಂದಿಸಿದರು. ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಅಜಯ್‌ವಾರಿಯರ್ ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.