×
Ad

ನೀತಿ ಸಂಹಿತೆ ಉಲ್ಲಂಘನೆ ಆರೋಪ : ಸಚಿವ ಪ್ರಮೋದ್ ವಿರುದ್ಧ ಪ್ರಕರಣ ದಾಖಲು

Update: 2018-04-08 22:31 IST

ಉಡುಪಿ, ಎ.8: ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ  ವೇಯ್ಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕ ಪಡೆದ ಕುಂದಾಪುರದ ಗುರುರಾಜ್ ಪೂಜಾರಿ ಅವರಿಗೆ ಸರಕಾರಿ ಉದ್ಯೋಗ ಮತ್ತು 25 ಲಕ್ಷ ರೂ. ನಗದು ನೀಡುವ ಭರವಸೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಪ್ರಮೋದ್ ಮಧ್ವರಾಜ್ ಎ.6ರಂದು ಮಾಧ್ಯಮಕ್ಕೆ ನೀಡಿದ್ದ ಹೇಳಿಕೆ ಕೆಲ ಪತ್ರಿಕೆಗಳಲ್ಲಿ ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಕಟಗೊಂಡಿದ್ದು, ಈ ಹೇಳಿಕೆಯೂ ಮತದಾರರನ್ನು ಓಲೈಸುವಂತಿದೆ ಎಂದು ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಚಿವರ ಹೇಳಿಕೆ ಹಿನ್ನೆಲೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಚ್. ಕೆಂಪೇಗೌಡ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಂದ ವರದಿ ಪಡೆದಿದ್ದು, ರಾಜ್ಯ ಕ್ರೀಡಾ ನೀತಿ 2018ರಲ್ಲಿ ಜಾರಿಗೆ ಬಂದಿದ್ದು, ಈ ಬಗ್ಗೆ ಯಾವುದೇ ಗೆಜೆಟ್ ನೋಟಿಫಿಕೇಷ್ ಆಗಿರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಈ ಮಾಹಿತಿ ಆಧಾರದ ಮೇಲೆ ಸಚಿವ ಪ್ರಮೋದ್ ಮಧ್ವರಾಜ್ ಅವರ ಹೇಳಿಕೆ, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಮತದಾರರನ್ನು ಓಲೈಸುವಂತಿದೆ ಎಂದು ಚುನಾವಣಾಧಿಕಾರಿಗಳು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News