100 ಜನರಿಗೆ ಊಟ: ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಪ್ರಕರಣ
ಕಾಪು, ಎ.8: ನೀತಿ ಸಂಹಿತೆ ಉಲ್ಲಂಘಿಸಿ 100 ಜನರಿಗೆ ಊಟ ಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಶೆಟ್ಟಿ ಎಂಬುವವರ ಮೇಲೆ ಚುನಾವಣಾಧಿಕಾರಿಗಳು ರವಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2 ದಿನಗಳ ಹಿಂದೆ ಶಿರ್ವ ಠಾಣೆ ವ್ಯಾಪ್ತಿಯ ಬೆಳಪುವಿನಲ್ಲಿ ನಡೆದ ಕಾಂಗ್ರೆಸ್‌ನ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದ ವೀಡಿಯೊ ಚಿತ್ರೀಕರಣ ಮಾಡಲಾಗಿದ್ದು, ಇಂದು ವೀಡಿಯೊ ತಪಾಸಣೆ ನಡೆಸುವಾಗ ಊಟ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ವೀಡಿಯೊ ಚಿತ್ರೀಕರಣದ ಆಧಾರದ ಮೇಲೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗೀತಾಂಜಲಿ ಸುವರ್ಣ ವಿರುದ್ಧ ಪ್ರಕರಣ
ಇದೇ ರೀತಿಯ ಪ್ರಕರಣ ಬಿಜೆಪಿಯ ಹಿರಿಯ ನಾಯಕಿ ಹಾಗೂ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ವಿರುದ್ಧವೂ ದಾಖಲಾಗಿದೆ. ಎರಡು ದಿನಗಳ ಹಿಂದೆ ಕಟಪಾಡಿಯಲ್ಲಿ ಬಿಜೆಪಿ ಮಹಿಳಾ ಸಮಾವೇಶದ ವೇಳೆ ಬಂದವರಿಗೆ ಊಟ ನೀಡಿರುವುದು ಕಾರ್ಯಕ್ರಮದ ವೀಡಿಯೊ ಚಿತ್ರಣವನ್ನು ಇಂದು ಪರಿಶೀಲಿಸಿದಾಗ ಬೆಳಕಿಗೆ ಬಂದಿದ್ದು, ಈ ಬಗ್ಗೆ ಗೀತಾಂಜಲಿ ಸುವರ್ಣ ವಿರುದ್ಧ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.