×
Ad

ನೀತಿ ಸಂಹಿತೆ ಜಾರಿಯಲಿದ್ದರೂ ಬೆಳ್ತಂಗಡಿ ತಾಲೂಕು ಕಚೇರಿಗೆ ಅನ್ವಯಿಸುವುದಿಲ್ಲ: ಸ್ಥಳೀಯರ ಆರೋಪ

Update: 2018-04-08 23:18 IST

ಬೆಳ್ತಂಗಡಿ, ಎ. 8 : ಮೇ.12ರಂದು ನಡೆಯುವ ವಿಧಾನ ಸಭೆಯ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ತಾಲೂಕಿನಲ್ಲಿರುವ ಅಧಿಕೃತ ಹಾಗೂ ಅನಧಿಕೃತ ಬ್ಯಾನರ್, ಫ್ಲೆಕ್ಸ್, ಭಿತ್ತಿ ಪತ್ರ ಹಾಗೂ ಗೋಡೆ ಬರಹಗಳಿಗೆ ಕಡಿವಾಣ ಬಿದ್ದಿದೆ. ಆದರೆ ತಾಲೂಕು ಕಚೇರಿಯಲ್ಲಿ ಮಾತ್ರ ಇದು ಅನ್ವಯ ಆದಂತೆ ಅನ್ನಿಸುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಾ. 27ರಿಂದ ನೀತಿ ಸಂಹಿತೆ ಜಾರಿಯಾಗಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಬ್ಯಾನರ್, ಫ್ಲೆಕ್ಸ್ ಅಳವಡಿಸಲು ಹಾಗು ಇತರ ಕಾರ್ಯ ಕ್ರಮಗಳಿಗೂ ಅನುಮತಿ ಕಡ್ಡಾಯ. ಬೆಳ್ತಂಗಡಿ ಹೊಸತಾಗಿ ನಿರ್ಮಾಣವಾದ ಮಿನಿ ವಿಧಾನಸೌಧದ ತಹಶೀಲ್ದಾರರ ಕೊಠಡಿಯಲ್ಲಿ ರಾಜಕೀಯ ನಾಯಕರ ಭಾವಚಿತ್ರ ಇರುವ ಕ್ಯಾಲೆಂಡರ್ ರಾರಾಜಿಸುತ್ತಿತ್ತು. ಸರಕಾರಿ ಕಚೇರಿಗಳಲ್ಲಿ ರಾಜಕೀಯ ರಹಿತ ಭಾವಚಿತ್ರಗಳು ಚುನಾವಣಾ ಸಂದರ್ಭ ಇರಬಹುದು. ಒಂದು ವೇಳೆ ದೇಶದ ಉನ್ನತ ಜನಪ್ರತಿನಿಧಿಗಳ ಭಾವಚಿತ್ರ ಇದ್ದಲ್ಲಿ ಅದನ್ನು ತೆಗೆದು ಇರಿಸಬೇಕಾಗುತ್ತದೆ. ಇಲ್ಲವಾದರೆ ಭಾವಚಿತ್ರಕ್ಕೆ ಮರೆ ಮಾಡಬೇಕಾಗುತ್ತದೆ.

ಎ. 1 ರಂದು ತಮ್ಮಣ ಚಿನ್ನಪ್ಪ ಹಾದಿಮನಿಯವರು ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರು. ತಹಶೀಲ್ದಾರ್ ಕೊಠಡಿಯನ್ನು ಒಳ ಹೊಕ್ಕುವಾಗಲೇ ಕ್ಯಾಲೆಂಡರ್ ಕಣ್ಣಿಗೆ ಬೀಳುತ್ತದೆ. ಆದರೂ ಅವರ ಗಮನಕ್ಕೆ ಬಾರದಿರುವುದು ವಿಪರ್ಯಾಸ. ನೀತಿ ಸಂಹಿತೆ ಜಾರಿಯಾಗಿದ್ದರೂ ಎ. 7 ರ ವರೆಗೂ ತಹಶೀಲ್ದಾರ ಕೊಠಡಿಯಲ್ಲಿ ರಾಜಕೀಯ ನಾಯಕರ ಭಾವಚಿತ್ರ ಇರುವ ಕ್ಯಾಲೆಂಡರ್ ಇತ್ತು. ಚುನಾವಣಾ ಕಚೇರಿಯೂ ಇದೇ ಕಟ್ಟಡದಲ್ಲಿದ್ದರೂ ಕ್ಯಾಲೆಂಡರ್‌ನ್ನು ತೆರವು ಮಾಡದಿರುವುದು ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಆಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News