ಪ್ರಧಾನಿ ನಿವಾಸಕ್ಕೆ ರ್ಯಾಲಿ ನಡೆಸಿದ ಟಿಡಿಪಿ ಸಂಸದರ ಬಂಧನ, ಬಿಡುಗಡೆ
ಹೊಸದಿಲ್ಲಿ, ಎ. 8: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ರ್ಯಾಲಿ ನಡೆಸುತ್ತಿದ್ದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ ಸಂಸದರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
19 ಸಂಸದರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಅನಂತರ ಬಿಡುಗಡೆ ಮಾಡಿದರು. ಪೊಲೀಸರು ಬಂಧಿಸುವ ಮೊದಲು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತೆಲುಗು ದೇಶಂ ಪಕ್ಷದ ಸಂಸದರನ್ನು ಭೇಟಿಯಾಗಿದ್ದಾರೆ.
‘‘ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡುವಂತೆ ಆಗ್ರಹಿಸಿ ರ್ಯಾಲಿ ನಡೆಸಿದ ಟಿಡಿಪಿ ಸಂಸದರನ್ನು ತುಘ್ಲನ್ ರೋಡ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಾನು ಅಲ್ಲಿಗೆ ತೆರಳಿ ಸಂಸದರನ್ನು ಭೇಟಿಯಾದೆ. ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂಬ ಆಗ್ರಹಕ್ಕೆ ನನ್ನ ಪೂರ್ಣ ಬೆಂಬಲ ಇದೆ’’ ಎಂದು ಅವರು ಹೇಳಿದ್ದಾರೆ. ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಆಗ್ರಹದ ಕುರಿತು ಮುಂದಿನ ಹೆಜ್ಚೆ ಬಗ್ಗೆ ತೀರ್ಮಾನಿಸಲು ರವಿವಾರ ಬೆಳಗ್ಗೆ ರಾಜ್ಯ ಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ವೈ.ಎಸ್. ಚೌಧರಿ ಅವರ ನಿವಾಸದಲ್ಲಿ ಟಿಡಿಪಿ ಸಂಸದರು ಸಭೆ ನಡೆಸಿದ ಬಳಿಕ ಟಿಡಿಪಿ ಪ್ರತಿಭಟನೆ ನಡೆಸುವ ನಿರ್ಧಾರ ತೆಗೆದುಕೊಂಡಿತ್ತು.
ವಿಶೇಷ ಸ್ಥಾನಮಾನ ನೀಡುವ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ ಪ್ರಧಾನಿ. ಅವರು ಭರವಸೆ ಈಡೇರಿಸಬೇಕು ಹಾಗೂ ಅದಕ್ಕೆ ನಾವು ಅವರ ನಿವಾಸಕ್ಕೆ ರ್ಯಾಲಿ ನಡೆಸಿದೆವು ಎಂದು ಸಂಸದ ಜಯದೇವ್ ಗಲ್ಲಾ ಹೇಳಿದ್ದಾರೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡದ ಹಿನ್ನೆಲೆಯಲ್ಲಿ ಟಿಡಿಪಿ ಕಳೆದ ತಿಂಗಳು ಎನ್‌ಡಿಎಯೊಂದಿಗಿನ ಮೈತ್ರಿ ಮುರಿದುಕೊಂಡಿತ್ತು ಹಾಗೂ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರದಿಂದ ತನ್ನ ಸಚಿವರನ್ನು ಹಿಂದೆಗೆದುಕೊಂಡಿತ್ತು. ಅನಂತರ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ರಯತ್ನಿಸಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ.