ಬಿಜೆಪಿ ಶಾಸಕನ ಅಣತಿಯಂತೆ ಹತ್ಯೆ: ಸಂತ್ರಸ್ತೆಯ ಆರೋಪ

Update: 2018-04-09 14:43 GMT
ANI Photo

ನ್ಯಾಯಾಂಗ ತನಿಖೆಗೆ ಆದೇಶ

ಉನ್ನಾವೊ, ಎ. 9:  ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗಾರ್ ಹಾಗೂ ಅವರ ಸಹೋದರನಿಂದ ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ಆರೋಪಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದ 18 ವರ್ಷದ ಯುವತಿಯ ತಂದೆ ನ್ಯಾಯಾಂಗ ಬಂಧನದಲ್ಲಿ ಸೋಮವಾರ ಮೃತಪಟ್ಟಿದ್ದಾರೆ. “ಆದರೆ ಇದು ಸಾವಲ್ಲ, ಶಾಸಕರ ಅಣತಿಯಂತೆ ನಡೆದ ಹತ್ಯೆ” ಎಂದು ಯುವತಿ ಹಾಗೂ ಅವರ ಕುಟುಂಬ ಆರೋಪಿಸಿದೆ.

ಯುವತಿಯ ತಂದೆ ಪಪ್ಪು ಸಿಂಗ್ (50) ಅವರನ್ನು ರವಿವಾರ ರಾತ್ರಿ ಜಿಲ್ಲಾ ಕಾರಾಗೃಹದಿಂದ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ರವಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಪಪ್ಪು ಸಿಂಗ್ ಅವರ ಶವ ಪರೀಕ್ಷೆ ನಡೆಸಿದ ವೈದ್ಯರ ತಂಡ ನೀಡಲಿರುವ ವರದಿಯಿಂದ ಸಾವಿಗೆ ಖಚಿತ ಕಾರಣಗಳನ್ನು ತಿಳಿಯಬಹುದು ಎಂದು ಜಿಲ್ಲಾ ದಂಡಾಧಿಕಾರಿ ರವಿ ಕುಮಾರ್ ಎನ್.ಜಿ. ತಿಳಿಸಿದ್ದಾರೆ.

“ಬಿಜೆಪಿ ಶಾಸಕನ ಅಣತಿಯಂತೆ ಜೈಲಿನ ಒಳಗಡೆ ನನ್ನ ತಂದೆಯನ್ನು ಹತ್ಯೆಗೈಯಲಾಗಿದೆ. ಅವರು ನಮಗೆ ಬೆದರಿಕೆ ಒಡ್ಡಿದ್ದರು” ಎಂದು ಅತ್ಯಾಚಾರ ಸಂತ್ರಸ್ತೆ ಯುವತಿ ಆರೋಪಿಸಿದ್ದಾರೆ. ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾದ ಸೋನು, ಬಾವು, ವಿನೀತ್ ಹಾಗೂ ಶೈಲು ಅವರನ್ನು ಬಂಧಿಸಲಾಗಿದೆ. ಮಖಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಶೋಕ್ ಕುಮಾರ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉನ್ನಾವೊ ಪೊಲೀಸ್ ಅಧೀಕ್ಷಕಿ ಪುಷ್ಪಾಂಜಲಿ ಹೇಳಿದ್ದಾರೆ.

ಪ್ರಕರಣದ ತನಿಖೆಗೆ ಲಕ್ನೋ ಪೊಲೀಸರ ತಂಡವೊಂದನ್ನು ರೂಪಿಸಲಾಗಿದೆ. ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಒ.ಪಿ. ಸಿಂಗ್ ಹೇಳಿದ್ದಾರೆ. ಕುಲ್‌ದೀಪ್ ಸಿಂಗ್ ಸೆಂಗಾರ್ ಹಾಗೂ ಅವರ ಸಹೋದರ ಅನಿಲ್ ಸಿಂಗ್ ಥಳಿಸಿದ ಬಳಿಕ ಪಪ್ಪು ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಎಪ್ರಿಲ್ 5ರಂದು ಬಂಧಿಸಲಾಗಿತ್ತು.

ಉತ್ತರಪ್ರದೇಶದಲ್ಲಿ ಕೋಚಿಂಗ್ ಕ್ಲಾಸಿಗೆ ಹೋದ ಬಾಲಕಿಯನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ. ಯುವತಿಯೋರ್ವರು ಬಿಜೆಪಿ ಶಾಸಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ನಿವಾಸದ ಹೊರಗಡೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸರಕಾರದ ಈ ಎನ್‌ಕೌಂಟರ್‌ನಿಂದ ಕ್ರಿಮಿನಲ್‌ಗಳ ಬದಲಾಗಿ ಮಹಿಳೆಯರು ಭೀತಿಗೊಂಡಿದ್ದಾರೆ.

ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

ನ್ಯಾಯಾಂಗ ತನಿಖೆಗೆ ಆದೇಶ

ಪಪ್ಪು ಸಿಂಗ್ ಅವರ ಕಸ್ಟಡಿ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಉತ್ತರಪ್ರದೇಶದ ಸಂಪುಟ ಸಚಿವ ಹಾಗೂ ಸರಕಾರದ ವಕ್ತಾರ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ. ಒಂದು ವೇಳೆ ಆರೋಪ ಸತ್ಯವಾದರೆ, ಇದು ಅತಿ ದುರಾದೃಷ್ಟಕರ ಘಟನೆ. ಪಾರದರ್ಶಕ ವಿಚಾರಣೆಗೆ ತನಿಖೆಯನ್ನು ಲಕ್ನೋದಿಂದ ಉನ್ನಾವೊಗೆ ವರ್ಗಾಯಿಸಲಾಗಿದೆ. ಸಂತ್ರಸ್ರರ ಕುಟುಂಬಕ್ಕೆ ನ್ಯಾಯ ಒದಗಿಸಲು ರಾಜ್ಯ ಸರಕಾರ ಬದ್ದವಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News