ರೊಹಿಂಗ್ಯಾ ನಿರಾಶ್ರಿತರಿಗೆ ನೀಡುವ ಸೌಲಭ್ಯಗಳ ಕುರಿತು ಸಮಗ್ರ ವರದಿ ಸಲ್ಲಿಸಿ: ಕೇಂದ್ರಕ್ಕೆ ಸುಪ್ರೀಂ ನಿರ್ದೇಶ

Update: 2018-04-09 14:36 GMT

ಹೊಸದಿಲ್ಲಿ,ಎ.9: ದಿಲ್ಲಿ ಹಾಗೂ ಹರ್ಯಾಣದ ಮೇವಾತ್ ಮತ್ತು ಫರೀದಾಬಾದ್ ಗಳಲ್ಲಿಯ ಮೂರು ರೊಹಿಂಗ್ಯಾ ನಿರಾಶ್ರಿತರ ಶಿಬಿರಗಳಲ್ಲಿ ಒದಗಿಸಲಾಗಿರುವ ಮೂಲ ಸೌಲಭ್ಯಗಳ ಕುರಿತು ಸಮಗ್ರ ಸ್ಥಿತಿಗತಿ ವರದಿಯೊಂದನ್ನು ನಾಲ್ಕು ವಾರಗಳಲ್ಲಿ ತನಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಮುಂದಿನ ವಿಚಾರಣೆಯನ್ನು ಮೇ 9ಕ್ಕೆ ನಿಗದಿಗೊಳಿಸಿತು.

ಶೌಚಾಲಯಗಳು, ಕುಡಿಯುವ ನೀರು ಇತ್ಯಾದಿ ಮೂಲ ಸೌಲಭ್ಯಗಳನ್ನು ತಮಗೆ ಒದಗಿಸಲಾಗಿಲ್ಲ ಮತ್ತು ಇದರಿಂದಾಗಿ ಶಿಬಿರಗಳಲ್ಲಿ ಮಕ್ಕಳು ಮತ್ತು ವಯಸ್ಸಾದವರು ಭೇದಿಯಿಂದ ನರಳುತ್ತಿದ್ದಾರೆ ಎಂದು ರೊಹಿಂಗ್ಯಾ ನಿರಾಶ್ರಿತರು ಆರೋಪಿಸಿದ್ದಾರೆ.

ರೊಹಿಂಗ್ಯಾ ನಿರಾಶ್ರಿತರಿಗೆ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಿದರೆ ಅದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗುತ್ತದೆ ಮತ್ತು ಇದರಿಂದ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಗಳೊಂದಿಗಿನ ಭಾರತದ ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮವುಂಟಾಗುತ್ತದೆ ಎಂದು ಮಾ.19ರಂದು ಕೇಂದ್ರವು ಮಾಡಿಕೊಂಡಿದ್ದ ನಿವೇದನೆಯನ್ನು ಪುರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಈ ನಿರಾಶ್ರಿತರಿಗೆ ಮಧ್ಯಂತರ ಪರಿಹಾರವನ್ನು ನಿರಾಕರಿಸಿತ್ತು.

ಕೇಂದ್ರದ ಹೇಳಿಕೆಗಳಿಗೆ ವಿರುದ್ಧವಾದ ಸಾಕ್ಷಾಧಾರಗಳನ್ನು ತನ್ನ ಮುಂದೆ ಸಲ್ಲಿಸುವವರೆಗೆ ರೊಹಿಂಗ್ಯಾ ನಿರಾಶ್ರಿತರ ಶಿಬಿರಗಳಲ್ಲಿ ಆರೋಗ್ಯ ಮತ್ತು ಶೈಕ್ಷಣಿ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಯಾವದೇ ಮಧ್ಯಂತರ ಆದೇಶವನ್ನು ತಾನು ಹೊರಡಿಸುವುದಿಲ್ಲ ಎಂದು ಅದು ಹೇಳಿತ್ತು.

ತಮಿಳುನಾಡಿನಲ್ಲಿರುವ ಶ್ರೀಲಂಕಾ ತಮಿಳು ನಿರಾಶ್ರಿತರ ಶಿಬಿರಗಳ ಮಾದರಿಯಲ್ಲಿ ತಮಗೂ ವೈದ್ಯಕೀಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಒದಗಿಸುವಂತೆ ರೊಹಿಂಗ್ಯಾ ನಿರಾಶ್ರಿತರಾದ ಮುಹಮ್ಮದ ಸಲೀಮುಲ್ಲಾ ಮತ್ತು ಮುಹಮ್ಮದ್ ಶಾಕಿರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.

 ಮ್ಯಾನ್ಮಾರ್‌ನ ಪಶ್ಚಿಮ ರಾಖೈನ್ ರಾಜ್ಯದಲ್ಲಿಯ ಹಿಂಸಾಚಾರದಲ್ಲಿ ಜೀವವನ್ನು ಉಳಿಸಿಕೊಂಡು ಭಾರತವನ್ನು ಸೇರಿಕೊಂಡಿರುವ ರೊಹಿಂಗ್ಯಾ ನಿರಾಶ್ರಿತರು ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರ ಪ್ರದೇಶ, ದಿಲ್ಲಿ ಎನ್‌ಸಿಆರ್ ಮತ್ತು ರಾಜಸ್ಥಾನಗಳಲ್ಲಿಯ ಶಿಬಿರಗಳಲ್ಲಿ ವಾಸವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News