ಕೋಮು ಸೌಹಾರ್ದಕ್ಕಾಗಿ ಕಾಂಗ್ರೆಸ್‌ನಿಂದ ದೇಶಾದ್ಯಂತ ‘ಸದ್ಭಾವನಾ ಉಪವಾಸ್’

Update: 2018-04-09 15:00 GMT

ಹೊಸದಿಲ್ಲಿ,ಎ.9: ಆಡಳಿತ ಬಿಜೆಪಿಯಿಂದ ಜಾತಿ ಹಿಂಸಾಚಾರ, ಕೋಮುವಾದ ಮತ್ತು ಸಂಸತ್ತಿನ ನಿಷ್ಕ್ರಿಯತೆಯ ವಿರುದ್ಧ ಮತ್ತು ಶಾಂತಿ ಹಾಗೂ ಸೌಹಾರ್ದವನ್ನು ಉತ್ತೇಜಿಸಲು ಕಾಂಗ್ರೆಸ್ ಪಕ್ಷವು ಸೋಮವಾರ ತನ್ನ ಅಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ದೇಶಾದ್ಯಂತ ‘ಸದ್ಭಾವನಾ ಉಪವಾಸ್’ ನಡೆಸಿತು.

ಇಲ್ಲಿಯ ರಾಜಘಾಟ್‌ನಲ್ಲಿ ನಡೆದ ಉಪವಾಸ ಕಾರ್ಯಕ್ರಮದಲ್ಲಿ ರಾಹುಲ್ ಅವರೊಂದಿಗೆ ಕಮಲನಾಥ್, ಮಲ್ಲಿಕಾರ್ಜುನ ಖರ್ಗೆ, ಶೀಲಾ ದೀಕ್ಷಿತ್, ಅಶೋಕ್ ಗೆಹ್ಲೋಟ್ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡಿದ್ದರು.

 1984ರ ಸಿಖ್ ವಿರೋಧ ದಂಗೆಗಳ ಕರಿನೆರಳು ಕಾಂಗ್ರೆಸ್‌ನ ಉಪವಾಸದ ಮೇಲೆ ಬಿದ್ದಿತ್ತು. ದಂಗೆಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಾಗಿರುವ ಸಜ್ಜನ್ ಕುಮಾರ ಮತ್ತು ಜಗದೀಶ ಟೈಟ್ಲರ್ ಅವರನ್ನು ರಾಹುಲ್ ಮತ್ತು ಹಿರಿಯ ನಾಯಕರು ಕುಳಿತಿದ್ದ ವೇದಿಕೆಯಿಂದ ದೂರವಿರುವಂತೆ ಸೂಚಿಸಲಾಗಿತ್ತು. ಸಜ್ಜನ್ ಕುಮಾರ್ ತಕ್ಷಣವೇ ಸ್ಥಳದಿಂದ ತೆರಳಿದರೆ ಟೈಟ್ಲರ್ ಪಕ್ಷದ ಕಾರ್ಯಕರ್ತರ ಜೊತೆ ಕುಳಿತುಕೊಂಡರು.

ಸೌಹಾರ್ದಕ್ಕಾಗಿ ನಡೆಸುತ್ತಿರುವ ಈ ಉಪವಾಸವು ಬಿಜೆಪಿಯ ಕೋಮುವಾದಿ ರಾಜಕೀಯ ಮತ್ತು ಸಂಸತ್ತಿನ ನಿಷ್ಕ್ರಿಯತೆಯ ವಿರುದ್ಧವೂ ಆಗಿದೆ. ಪಿಎನ್‌ಬಿ ಹಗರಣ, ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ, ಆಂಧ್ರಕ್ಕೆ ವಿಶೇಷ ಸ್ಥಾನಮಾನ, ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಸಡಿಲಿಕೆ ಮತ್ತು ಕಾವೇರಿ ನಿರ್ವಹಣೆ ಮಂಡಳಿ ರಚನೆಯಂತಹ ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಕಾಂಗ್ರೆಸ್ ಬಯಸಿತ್ತು ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದರು.

ಇದು ಭಾರತವು ಪ್ರತಿನಿಧಿಸುತ್ತಿರುವ ಸಿದ್ಧಾಂತ ಮತ್ತು ಮೌಲ್ಯಗಳಿಗಾಗಿ ಹೋರಾಟವಾಗಿದೆ. ಮೋದಿ ಸರಕಾರದಿಂದ ಮತಗಳಿಕೆಯ ಉದ್ದೇಶದ ದ್ವೇಷ ಮತ್ತು ವಿಭಾಜಕ ರಾಜಕಾರಣವು ಯಶಸ್ವಿಯಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ ಕಾಂಗ್ರೆಸ್ ವಕ್ತಾರ ರಣದೀಪ ಸುರ್ಜೆವಾಲಾ ಅವರು, ಬ್ರಿಟಿಷ್‌ರಂತೆ ಒಡೆದು ಆಳುವ ನೀತಿ ಪ್ರಸಕ್ತ ಬಿಜೆಪಿ ಸರಕಾರದ್ದಾಗಿದೆ. ಸಮಾಜ, ಧರ್ಮಗಳು, ಸಮುದಾಯಗಳು, ಜಾತಿಗಳು....ಹೀಗೆ ಪ್ರತಿಯೊಂದನ್ನೂ ಒಡೆಯುವುದು ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಡಿಎನ್‌ಎ ಆಗಿದೆ ಎಂದು ಆರೋಪಿಸಿದರು.

ಧಾರ್ಮಿಕ ನೆಲೆಯಲ್ಲಿ ದೇಶವನ್ನು ವಿಭಜಿಸಿರುವ ಸರಕಾರವು ಈಗ ದಲಿತರು ಮತ್ತು ದಲಿತೇತರರ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದರು.

ನಮ್ಮ ಸಮಾಜದಲ್ಲಿ ಅದರ ವೈವಿಧ್ಯತೆ ಮತ್ತು ಬಹುತ್ವಗಳೊಂದಿಗೆ ಪರಸ್ಪರ ಸೋದರ ಭಾವ, ಅನುಕಂಪ ಮತ್ತು ಪ್ರೀತಿ,ಪರಸ್ಪರರಿಗೆ ಗೌರವ ಇವೆಲ್ಲ ಇರುವಂತೆ ನೋಡಿಕೊಳ್ಳುವುದು ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿರುವ ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿದೆ ಎಂದು ಸುರ್ಜೆವಾಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News