ಹಿರಿಯ ನಾಗರಿಕರಲ್ಲಿ ಆರೋಗ್ಯ ಕಾಳಜಿ ಅಗತ್ಯ : ಡಾ. ವಿರೂಪಾಕ್ಷ
ಉಡುಪಿ, ಎ.9: ಹಿರಿಯ ನಾಗರಿಕರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದು ಉಡುಪಿಯ ಮನೋರೋಗ ತಜ್ಞ, ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯ ಡಾ. ವಿರೂಪಾಕ್ಷ ದೇವರಮನೆ ತಿಳಿಸಿದ್ದಾರೆ.
ಸೋಮವಾರ ಅಜ್ಜರಕಾಡಿನ ರೆಡ್‌ಕ್ರಾಸ್ ಭವನದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಿವೃತ್ತಿಯ ನಂತರ ಹಿರಿಯ ನಾಗರಿಕರಿಗೆ ವಯೋ ಸಹಜವಾದ ಮರೆ ಗುಳಿತನ, ಕಿವಿ ಕೇಳಿಸದಿರುವುದು, ಕಣ್ಣು ಕಾಣಿಸದಿರುವುದು, ಮನೋ ದೈಹಿಕ ಕಾಯಿಲೆ ಮುಂತಾದ ಸಮಸ್ಯೆಗಳು ಬರುವುದು ಸಹಜ. ಆದರೆ ಇವುಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ಆರೋಗ್ಯಕರ ಜೀವನ ನಡೆಸಬಹುದು ಎಂದರು.
ಇತ್ತೀಚೆಗೆ ಖಿನ್ನತೆ ಸಹ ಹಿರಿಯ ನಾಗರಿಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಯುವಜನತೆಯನ್ನು ಹೊರತು ಪಡಿಸಿದರೆ ಖಿನ್ನತೆಯಿಂದ ಅತಿಹೆಚ್ಚು ಆತ್ಮಹತ್ಯೆ ಪ್ರಕರಣಗಳು ಹಿರಿಯ ನಾಗರಿಕರಲ್ಲಿ ಕಂಡುಬರುತ್ತಿದೆ. ಪ್ರತಿನಿತ್ಯ ಯಾವುದಾ ದರೊಂದು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ, ಸಮಾನ ಮನಸ್ಕರೊಂದಿಗೆ ಬೆರೆಯುವ ಮೂಲಕ ಹಾಗೂ ತಮ್ಮಲ್ಲಿನ ಅಹಂ ಸಿಟ್ಟು ಇವು ಗಳನ್ನು ಕಡಿಮೆ ಮಾಡಿಕೊಳ್ಳುವುದರಿಂದ ಸಂತೋಷಕರ ಜೀವನ ಸಾಗಿಸಲು ಸಾಧ್ಯವಿದೆ ಎಂದರು.
ನಿವೃತ್ತಿಯ ನಂತರ ಯಾವುದಾದರೂ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ಕ್ಷಮಾಗುಣ ಮತ್ತು ಹೊಂದಾಣಿಕೆ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಡಾ.ವಿರೂಪಾಕ್ಷ ಹೇಳಿದರು. ಹಿರಿಯ ನಾಗರಿಕರಲ್ಲಿ ವಯೋಸಹಜವಾಗಿ ಕಂಡುಬರುವ ವಿವಿಧ ದೈಹಿಕ ಮತ್ತು ಮಾನಸಿಕ ರೋಗಗಳ ಕುರಿತು ವಿವರಿಸಿದ ಡಾ. ವಿರೂಪಾಕ್ಷ, ಇವುಗಳನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದರು.
ರೆಡ್‌ಕ್ರಾಸ್‌ನ ಅಧ್ಯಕ್ಷ ಡಾ. ಉಮೇಶ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ಎಸ್.ರಾವ್, ರೆಡ್ ಕ್ರಾಸ್‌ನ ಖಜಾಂಜಿ ಟಿ.ಚಂದ್ರಶೇಖರ್, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ರೆಡ್‌ಕ್ರಾಸ್‌ನ ಉಪ ಸಭಾಪತಿ ಡಾ.ಅಶೋಕ್ ಕುಮಾರ್ ಸ್ವಾಗತಿಸಿ ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.