ಭಾರತ್ ಬಂದ್ ಹಿಂಸಾಚಾರ: 6 ಹತ್ಯೆಯಾದರೂ ಒಬ್ಬರನ್ನೂ ಬಂಧಿಸಿಲ್ಲ !

Update: 2018-04-09 15:20 GMT

ಭೋಪಾಲ್, ಎ. 9: ಸುಪ್ರೀಂ ಕೋರ್ಟ್‌ನ ತೀರ್ಪು ದಲಿತ ದೌರ್ಜನ್ಯ ತಡೆ ಕಾನೂನನ್ನು ದುರ್ಬಲಗೊಳಿಸುತ್ತದೆ ಎಂದು ಎಪ್ರಿಲ್ 2ರಂದು ಸಾವಿರಾರು ದಲಿತರು ನಡೆಸಿದ ಪ್ರತಿಭಟನೆ ಸಂದರ್ಭ ಹಲವು ದಲಿತರು ಸಾವನ್ನಪ್ಪಿದ್ದು, ಇವರು ಮೇಲ್ಜಾತಿಯ ಪ್ರತಿಕಾರಕ್ಕೆ ಬಲಿಯಾಗಿರುವ ಸಾಧ್ಯತೆ ಇದೆ ಎಂದು ಎನ್‌ಡಿಟಿವಿ ತನಿಖೆ ಬಹಿರಂಗಗೊಳಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಗೆ ಸುಪ್ರೀಂ ಕೋರ್ಟ್ ಬದಲಾವಣೆ ತಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸಂಭವಿಸಿದ ಪ್ರತಿಭಟನೆಯಲ್ಲಿ 11 ಮಂದಿ ಮೃತಪಟ್ಟಿದ್ದರು. ಇವರಲ್ಲಿ 8 ಮಂದಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ಗಡಿ ಭಾಗದ ಗ್ವಾಲಿಯರ್- ಭಿಂದ್-ಮೊರೇನಾ ವಲಯದಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ 7 ಸಾವಿನ ಬಗ್ಗೆ ಎನ್‌ಡಿಟಿವಿ ತನಿಖೆ ನಡೆಸಿದ್ದು, ಸಾವನ್ನಪ್ಪಿದ 7 ಮಂದಿಯಲ್ಲಿ 6 ಮಂದಿ ದಲಿತರು ಎಂಬುದು ಪತ್ತೆಯಾಗಿದೆ.

ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಮೇಲ್ಜಾತಿಯವರು. ಆರು ಪ್ರಕರಣಗಳಲ್ಲಿ ಒಬ್ಬನೇ ಒಬ್ಬನನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸ್ ದಾಖಲೆ ಪ್ರಕಾರ ಮೇಘಾಂವ್ ಹಾಗೂ ಭಿಂದ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ದಲಿತರಾದ ಪ್ರದೀಪ್ (22), ಆಕಾಶ್ (15) ಅವರನ್ನು ಮೇಲ್ಜಾತಿಯ ಗುಂಪು ಗುಂಡಿಟ್ಟು ಹತ್ಯೆಗೈದಿದೆ. ಮೇಲ್ಜಾತಿಗೆ ಸೇರಿದ ಸೋನು ಬೈಶಂದರ್, ಮೋನು, ಬಲ್ಲು ರಾಥೋಡ್ ಛಾವಣಿಯಲ್ಲಿ ನಿಂತು ಇವರಿಗೆ ಗುಂಡು ಹಾರಿಸಿದರು ಎಂದು ಪ್ರಥಮ ಮಾಹಿತಿ ವರದಿ ಹೇಳುತ್ತದೆ. ಆಕಾಶ್ ಜಾಟವ್‌ನ ಸಾವಿನ ಎಫ್‌ಐಆರ್‌ನಲ್ಲೂ ಇದೇ ಹೆಸರು ಕಂಡು ಬಂದಿದೆ. ಈ ಮೂವರು ನಾಪತ್ತೆಯಾಗಿದ್ದಾರೆ. ಪ್ರತಿಭಟನೆಯ ಬಳಿಕ 40 ಹರೆಯದ ದಶರಥ ಜಾಥವ್ ಅವರ ಮೃತದೇಹ ಭಿಂದ್‌ನ ಹೊಲದಲ್ಲಿ ಪತ್ತೆಯಾಗಿತ್ತು. ಮೇಲ್ಜಾತಿಯವರು ಜಾಟವ್‌ರನ್ನು ಹತ್ಯೆಗೈದಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ.

ಗ್ವಾಲಿಯರ್‌ನಲ್ಲಿ ಚಹಾದಂಗಡಿ ನಡೆಸುತ್ತಿದ್ದ 22 ವರ್ಷದ ದೀಪಕ್ ಜಾಟವ್ ನಿಗೂಢವಾಗಿ ಹತ್ಯೆಯಾಗಿದ್ದಾರೆ. ಅವರು ಚಹಾದಂಗಡಿ ಸಮೀಪ ನಿಂತಿದ್ದಾಗ ಎರಡು ಗುಂಡು ಅವರ ಹೊಟ್ಟೆಯನ್ನು ಹಾಗೂ ಒಂದು ಗುಂಡು ಅವರ ತಲೆಯನ್ನು ಸೀಳಿವೆ ಎಂದು ದೀಪಕ್ ಜಾಟವ್ ಅವರ ತಂದೆ ಹೇಳಿದ್ದಾರೆ. ಜಾತಿ ಹಿಂಸಾಚಾರದ ಕೇಂದ್ರವಾಗಿರುವ ಇದೇ ಪ್ರದೇಶದಲ್ಲಿ ಸ್ಥಳೀಯ ಮೇಲ್ಜಾತಿಯ ರಾಜಾ ಚೌಹಾಣ್ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿರುವ ವೀಡಿಯೊ ವೈರಲ್ ಆಗಿತ್ತು. ಈ ನಡುವೆ ದೀಪಕ್ ಸಾವಿನ ಕುರಿತು ಮಾಹಿತಿ ಹಂಚಿಕೊಳ್ಳಲು ಪೊಲೀಸರು ನಿರಾಕರಿಸುತ್ತಿದ್ದಾರೆ. ಭಿಂದ್‌ನಲ್ಲಿ ಗುಂಡು ತಗಲಿ ಮೃತಪಟ್ಟಿರುವ 40ರ ಹರೆಯದ ದಿನಗೂಲಿ ನೌಕರನಿಗೆ ಯಾರು ಗುಂಡು ಹಾರಿಸಿದರು ಎಂಬುದು ಇದುವರೆಗೆ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರತಿಭಟನೆಯಲ್ಲಿ ಇಬ್ಬರು ಮೇಲ್ಜಾತಿಗೆ ಸೇರಿದ ವ್ಯಕ್ತಿಗಳು ಕೂಡ ಮೃತಪಟ್ಟಿದ್ದಾರೆ. ಇದರಲ್ಲಿ ಓರ್ವ ಪೊಲೀಸರ ಗುಂಡಿಗೆ ಬಲಿಯಾಗಿದ್ದರೆ, ಇನ್ನೋರ್ವನ ಸಾವಿನಲ್ಲಿ ಜಾತಿ ಆಯಾಮ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News