×
Ad

ಮಣಿಪಾಲ: ಎ.11ರಿಂದ ವೈದ್ಯರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟ

Update: 2018-04-09 20:52 IST

ಉಡುಪಿ, ಎ.9: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಎ.11ರಿಂದ ವೈದ್ಯರು ಗಳಿಗಾಗಿ ರಾಷ್ಟ್ರೀಯ ಮಟ್ಟದ ಟಿ20 ಕ್ರಿಕೆಟ್ ಲೀಗ್ ‘ಸಿಲ್ವರ್ ಕ್ರಿಕೆಟ್ ಲೀಗ್-2018’ನ್ನು ಎಂಡ್‌ಪಾಯಿಂಟ್‌ನ ಮಣಿಪಾಲ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಿದೆ ಎಂದು ಪಂದ್ಯಕೂಟದ ಆಯೋಜಕರಾದ ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹೆ ತನ್ನ ಸ್ಥಾಪನೆಯ ಬೆಳ್ಳಿಹಬ್ಬವನ್ನು ಆಚರಿಸುತಿದ್ದು, ಇದರ ಅಂಗವಾಗಿ ವೈದ್ಯರ ತಂಡಗಳಿಗಾಗಿಯೇ ಈ 20-20 ಪಂದ್ಯಾಟವನ್ನು ಎಂಡ್‌ಪಾಯಿಂಟ್‌ನ ಹಚ್ಚಹಸಿರಿನ ಹುಲ್ಲುಹಾಸಿನ ಪಿಚ್‌ನಲ್ಲಿ ಎ.11ರಿಂ 15ರವರೆಗೆ ಆಯೋಜಿ ಸಿದೆ ಎಂದರು.

ಮಾಹೆ ಸಿಲ್ವರ್ ಟ್ರೋಫಿ: ಇಲ್ಲಿ ಆಡಲಾಗುವ ಎಲ್ಲಾ ಪಂದ್ಯಗಳು ಸಿಲ್ವರ್ ಕ್ರಿಕೆಟ್ ಲೀಗ್ ಪೇಸ್ ಬುಕ್ ಪೇಜ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಅಲ್ಲದೇ -www.cricscores.in- ಮೂಲಕ ಪಂದ್ಯಗಳ ಬಾಲ್ ಟು ಬಾಲ್ ಕಮೆಂಟರಿ ಮತ್ತು ಸ್ಕೋರ್ ವಿವರವನ್ನು ನೇರವಾಗಿ ವೀಕ್ಷಿಸಬಹುದಾಗಿದೆ ಎಂದೂ ಡಾ.ವಿನೋದ್ ಕುಮಾರ್ ತಿಳಿಸಿದರು.

ಇದಕ್ಕೆ ಮೊದಲು ಹೈದರಾಬಾದಿನಲ್ಲಿ ನಡೆದ ‘ರಾಷ್ಟ್ರೀಯ ಡಾಕ್ಟರ್ಸ್‌ ಲೀಗ್’ ಪಂದ್ಯಾಟದಲ್ಲಿ ಮಹಾರಾಷ್ಟ್ರ ಸ್ಟಾರ್ಸ್‌ ತಂಡ ಚಾಂಪಿಯನ್ ಆಗಿದ್ದರೆ, ಜೈಪುರ ತಂಡವು ರನ್ನರ್‌ಅಪ್ ಹಾಗೂ ಮಣಿಪಾಲ ತಂಡ ಮೂರನೆ ಸ್ಥಾನವನ್ನು ಗೆದ್ದುಕೊಂಡಿದ್ದವು.

ಪಂದ್ಯಾಟದಲ್ಲಿ ದೇಶದ ವಿವಿಧ ಭಾಗಗಳಿಂದ ಅಲೋಪಥಿಕ್, ಹೋಮಿಯೋಪಥಿಕ್, ಆಯುರ್ವೇದ ಮುಂತಾದ ವೈದ್ಯ ಪದ್ಧತಿಯ ವೈದ್ಯರುಗಳ ತಂಡ ಭಾಗವಹಿಸಲಿವೆ. ತುಂಗಾ ಮುಂಬೈ, ಸುಸೆಗಡ್ ಗೋಂಕರ್ಸ್‌ ಗೋವಾ, ಥಾನೆ ಸುಪರ್ಬ್, ಪದ್ಮಾಲಯ ಸ್ಟಾರ್ಸ್‌ ಪುಣೆ, ಮೈಸೂರು, ಕಿಮ್ಸ್ ಹೈದರಾಬಾದ್, ಬೆಂಗಳೂರು ಸ್ಪೆಷಲಿಸ್ಟ್, ಕ್ಯಾಲಿಕಟ್ ಹರಿಕೇನ್, ಟೀಂ ಮಣಿಪಾಲ್, ರೋಯಲ್ ಮಂಗಳೂರು, ಬ್ಲೆಂಡೆಡ್ ಕನ್ನಡಿಗಾಸ್ ಮುಂತಾದ ತಂಡಗಳು ಭಾಗವಹಿಸಲಿವೆ ಎಂದರು.

ಮೊದಲ ಹಂತದಲ್ಲಿ ಪ್ರತಿಯೊಂದು ತಂಡ, ಎರಡೆರಡು ಪಂದ್ಯಗಳನ್ನು ಆಡಬೇಕಾಗಿದ್ದು, ಪ್ರಥಮ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಹಂತ ಪ್ರವೇಶಿಸಲಿವೆ. ಪಂದ್ಯಗಳು ತಲಾ 20 ಓವರುಗಳ ಇನಿಂಗ್ಸ್ ಆಗಿದೆ. ಆಟಗಾರರು ಬಣ್ಣ ಬಣ್ಣದ ಕ್ರಿಕೆಟ್ ಸಮವಸ್ತ್ರಗಳನ್ನು ಧರಿಸಿದರೆ, ಆಟಕ್ಕೆ ಬಿಳಿ ಬಣ್ಣದ ಚೆಂಡನ್ನು ಬಳಸಲಾಗುವುದು ಎಂದು ಡಾ.ವಿನೋದ್ ತಿಳಿಸಿದರು.

ಉದ್ಘಾಟನೆ: ಪಂದ್ಯಾಟ ಎ.11ರ ಬುಧವಾರ ಬೆಳಗ್ಗೆ 8:45ಕ್ಕೆ ಮಣಿಪಾಲ ಎಂಡ್ ಪಾಯಿಂಟಿನ ಕ್ರಿಕೆಟ್ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದ್ದು, ಪ್ರತಿದಿನ ಎರಡು ಪಿಚ್‌ಗಳಲ್ಲಿ ತಲಾ ಮೂರು ಪಂದ್ಯಗಳನ್ನು ಆಡಲಾಗುತ್ತದೆ. ಎ.14ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆದರೆ, ಎ.15ರ ರವಿವಾರ ಫೈಲ್ ಪಂದ್ಯವನ್ನು ಆಡಲಾಗುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್, ಪಂದ್ಯಾಟದ ಪ್ರಾಯೋಜಕರಾದ ಮೆಡಿಲ್ಯಾಬ್ ಇಂಡಿಯಾದ ಆಡಳಿತ ನಿರ್ದೇಶಕ ಜ್ಯೋತಿಪ್ರಸಾದ್ ಹೆಗ್ಡೆ, ಡಾ. ನವೀನ್ ಪಾಟೀಲ್, ಕಾರ್ಯದಶಿರ್ ಬಾಲಕೃಷ್ಣ ಪರ್ಕಳ ಇವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News