ನೀರವ್ ಮೋದಿ ಬಂಧನ ವಿಷಯದಲ್ಲಿ ಹಸ್ತಕ್ಷೇಪ ನಡೆಸಲಾರೆ: ಚೀನಾ
ಬೀಜಿಂಗ್,ಎ.9: ಪಿಎನ್‌ಬಿ ಬ್ಯಾಂಕ್‌ಗೆ ಕೋಟ್ಯಂತರ ರೂ. ವಂಚಿಸಿ, ಹಾಂಕಾಂಗ್‌ನಲ್ಲಿ ತಲೆಮರೆಸಿಕೊಂಡಿದ್ದಾನೆಂದು ಶಂಕಿಸಲಾದ ಭಾರತೀಯ ಜ್ಯುವೆಲ್ಲರ್ ಉದ್ಯಮಿ ನೀರವ್ ಮೋದಿ ಬಂಧನದ ವಿಷಯದಲ್ಲಿ ತಾನು ಯಾವುದೇ ರೀತಿಯ ಹಸ್ತಕ್ಷೇಪ ನಡೆಸುವುದಿಲ್ಲವೆಂದು ಚೀನಾವು ಸೋಮವಾರ ತಿಳಿಸಿದೆ.
ಪಿಎನ್‌ಬಿ ಬ್ಯಾಂಕ್‌ಗೆ 200 ಕೋಟಿ ವಂಚನೆ ಹಗರಣದ ಮುಖ್ಯ ಆರೋಪಿ ನೀರವ್ ಮೋದಿ ಹಾಂಗ್‌ಕಾಂಗ್‌ನಲ್ಲಿ ತಲೆಮರೆಸಿಕೊಂಡಿದ್ದಾನೆಂದು ನಂಬಲಾಗಿದೆ. ಮಾಜಿ ಬ್ರಿಟಿಶ್ ವಸಾಹತು ಪ್ರದೇಶವಾದ ಹಾಂಕಾಂಗ್ ಈಗ ಚೀನಾಕ್ಕೆ ಸೇರ್ಪಡೆಯಾಗಿದ್ದರೂ, ಉನ್ನತ ಮಟ್ಟದ ಸ್ವಾಯತ್ತೆಯನ್ನು ಹೊಂದಿದೆ.
‘‘ ಒಂದು ದೇಶ ಎರಡು ವ್ಯವಸ್ಥೆ ಹಾಗೂ ಹಾಂಕಾಂಗ್ ವಿಶೇಷ ಆಡಳಿತಾತ್ಮಕ ಪ್ರಾಂತ (ಎಸ್‌ಎಆರ್) ಮೂಲಭೂತ ಕಾನೂನುಗಳ ಪ್ರಕಾರ ಹಾಗೂ ಕೇಂದ್ರ ಸರಕಾರದ ಅನುಮೋದನೆಯ ಮೇರೆಗೆ, ಹಾಂಕಾಂಗ್ ವಿಶೇಷ ಆಡಳಿತಾತ್ಮಕ ಪ್ರಾಂತವು ಇತರ ದೇಶಗಳ ಜೊತೆ ಪರಸ್ಪರ ನ್ಯಾಯಾಂಗ ನೆರವಿಗೆ ಸಂಬಂಧಿಸಿ ಸೂಕ್ತವಾದ ಏರ್ಪಾಡುಗಳನ್ನು ಮಾಡಬಹುದಾಗಿದೆ’’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್ ತಿಳಿಸಿದ್ದಾರೆ.
ಒಂದು ವೇಳೆ ಭಾರತವು ನೀರವ್ ಮೋದಿ ಕುರಿತಾಗಿ ಹಾಂಕಾಂಗ್‌ನೊಂದಿಗೆ ಸಮರ್ಪಕವಾದ ಮನವಿಯನ್ನು ಮಾಡಿದಲ್ಲಿ, ನಾವು ಆ ವಿಷಯವನ್ನು ಹಾಂಕಾಂಗ್ ವಿಶೇಷ ಆಡಳಿತಾತ್ಮಕ ಪ್ರಾಂತದ ಕೈಗೆ ಬಿಟ್ಟುಕೊಡಲಿದ್ದೇವೆ. ಇಂತಹ ಪ್ರಸಕ್ತ ವಿಷಯವನ್ನು ನಿಭಾಯಿಸಲು ಅದು ಮೂಲಭೂತ ಕಾನೂನುಗಳನ್ನು ಅನುಸರಿಸಲಿದೆ ಹಾಗೂ ಭಾರತದೊಂದಿಗೆ ಸೂಕ್ತವಾದ ನ್ಯಾಯಾಂಗ ವ್ಯವಸ್ಥೆಯ ಒಡಂಬಡಿಕೆಯನ್ನು ಮಾಡಲಿದೆಯೆಂದು ಜೆಂಗ್ ತಿಳಿಸಿದ್ದಾರೆ.
ಹಾಂಕಾಂಗ್ ಚೀನಾದ ಪ್ರಾಂತವಾದರೂ, ಅದು ವಿಶೇಷವಾದ ಆಡಳಿತಾತ್ಮಕ ಸ್ವಾಯತ್ತೆಯನ್ನು ಹೊಂದಿದ್ದು, ಅದರ ರಕ್ಷಣೆ ಹಾಗೂ ವಿದೇಶಾಂಗ ವ್ಯವಹಾರಗಳಲ್ಲಿ ಮಾತ್ರ ಚೀನಾ ಅಧಿಕಾರವನ್ನು ಹೊಂದಿದೆ. ಹಾಂಕಾಂಗ್ ಜೊತೆ ಭಾರತವು ಗಡಿಪಾರು ಒಪ್ಪಂದವನ್ನು ಹೊಂದಿದೆಯಾದರೂ, ಅದು ಚೀನಾದೊಂದಿಗೆ ಅಂತಹ ಒಪ್ಪಂದವನ್ನು ಮಾಡಿಕೊಂಡಿಲ್ಲ.