×
Ad

ಗಾಝಾದಲ್ಲಿ ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ವಾಯುದಾಳಿ

Update: 2018-04-09 22:48 IST
ಫೈಲ್ ಫೋಟೊ

ಜೆರುಸಲೇಂ,ಎ.9: ಉತ್ತರ ಗಾಝಾದಲ್ಲಿ ಸೋಮವಾರ ಇಸ್ರೇಲ್ ಸೇನೆಯ ಫೈಟರ್ ಜೆಟ್ ವಿಮಾನಗಳು ಹಮಾಸ್ ಹೋರಾಟಗಾರರ ನೆಲೆಗಳ ಮೇಲೆ ಗುರಿಯಿರಿಸಿ ಬಾಂಬ್ ದಾಳಿಯನ್ನು ನಡೆಸಿವೆ. ರವಿವಾರ ಗಾಝಾದ ಗಡಿಬೇಲಿಯನ್ನು ದಾಟಿ ಹಮಾಸ್ ಹೋರಾಟಗಾರರು ನುಸುಳಿ, ಸ್ಫೋಟಕಗಳನ್ನು ಹುದುಗಿರಿಸಿದ್ದು, ಇದಕ್ಕೆ ಪ್ರತೀಕಾರವಾಗಿ ಇಂದು ವಾಯುದಾಳಿ ನಡೆಸಿದ್ದಾಗಿ ಇಸ್ರೇಲ್ ಹೇಳಿಕೊಂಡಿದೆ.

    ಬಾಂಬ್ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ತಕ್ಷಣ ವರದಿಯಾಗಿಲ್ಲವೆಂದು ಮೂಲಗಳು ತಿಳಿಸಿವೆ. ಗಾಝಾಪಟ್ಟಿ ಗಡಿಯಲ್ಲಿ ಸೈನಿಕರು ಹಾಗೂ ಫೆಲೆಸ್ತೀನ್ ನಾಗರಿಕರ ಜೊತೆ ಕಳೆದ ಹತ್ತು ದಿನಗಳಲ್ಲಿ ನಡೆದ ಘರ್ಷಣೆಯಲ್ಲಿ ನಾಗರಿಕರ ಮೇಲೆ ಇಸ್ರೇಲ್ ಸೇನೆ ಗುಂಡು ಹಾರಾಟ ನಡೆಸಿದ ಪರಿಣಾಮವಾಗಿ 30ಕ್ಕೂ ಅಧಿಕ ಮಂದಿ ಫೆಲೆಸ್ತೀನಿಯರು ಮೃತಪಟ್ಟ ಘಟನೆ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಫೆಲೆಸ್ತೀನ್ ಹೋರಾಟಗಾರರು ಗಡಿಬೇಲಿಗೆ ಹಾನಿಯನ್ನುಂಟು ಮಾಡುವುದನ್ನು ತಡೆಗಟ್ಟಲು, ಒಳನುಸುಳುವಿಕೆಯನ್ನು ತಡೆಯಲು ಹಾಗೂ ದಾಳಿ ಪ್ರಯತ್ನವನ್ನು ಹಿಮ್ಮೆಟ್ಟಿಸಲು ತಾನು ಗುಂಡು ಹಾರಿಸುವುದು ಆನಿವಾರ್ಯವಾಗಿತ್ತೆಂದು ಇಸ್ರೇಲ್ ಹೇಳಿಕೊಂಡಿದೆ.

 ಮಾರ್ಚ್ 30ರಂದು ಗಾಝಾ ಗಡಿಯಲ್ಲಿ ಫೆಲೆಸ್ತೀನ್ ನಾಗರಿಕರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಇಸ್ರೇಲ್ ಸೈನಿಕರ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಫೆಲೆಸ್ತೀನ್ ಪ್ರಜೆ, 44 ವರ್ಷ ವಯಸ್ಸಿನ ಮರ್ವಾನ್ ಆವ್ವಾದ್ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಮಾರ್ಚ್ 30ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ 19 ಮಂದಿ ಫೆಲೆಸ್ತೀನ್ ನಾಗರಿಕರು ಇಸ್ರೇಲ್ ಸೇನೆಯ ಗುಂಡಿಗೆ ಬಲಿಯಾಗಿದ್ದರು ಹಾಗೂ 1400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News