ಭಟ್ಕಳ ಅರ್ಬನ್ ಬ್ಯಾಂಕಿನಿಂದ ವಾರ್ಷಿಕ ಫಲಿತಾಂಶ ಪ್ರಕಟ
ಭಟ್ಕಳ, ಎ. 9: ಗ್ರಾಹಕರಿಗೆ ಅಪೂರ್ವ ಸೇವೆಯನ್ನು ನೀಡುವ ಮೂಲಕ ಜನಮನದಲ್ಲಿ ನೆಲೆಯಾಗಿರುವ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 54 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ, ಸಹಕಾರಿ ರಂಗದಲ್ಲಿ 55ನೇ ವರ್ಷಕ್ಕೆ ಪಾದಾರ್ಪಿಸಿದೆ. ನಿರಂತರವಾಗಿ ಗುರುತರ ಸಾಧನೆಯನ್ನು ಸಾಧಿಸುತ್ತಾ ಬಂದಿರುವ ಈ ಬ್ಯಾಂಕು ಮಾ. 31 ರಂದು ಸಮಾಪ್ತಿಗೊಂಡ 2017-18 ನೇ ಸಾಲಿನ ಆರ್ಥಿಕ ವರ್ಷದ ಫಲಿತಾಂಶ ಪ್ರಕಟಿಸಿದ್ದು, 6 ಕೋಟಿ ರೂ. 12 ಲಕ್ಷ ನಿರ್ವಹಣಾ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ತಿಳಿಸಿರುತ್ತಾರೆ.
ಬ್ಯಾಂಕಿನ ಠೇವಣಿಯು 418 ಕೋಟಿ 55 ಲಕ್ಷ ರೂ. ತಲುಪಿದ್ದು, ಸಾಲ ಮುಂಗಡವು 215 ಕೋಟಿ 54 ಲಕ್ಷ ರೂ.ವಾಗಿದೆ. ಬ್ಯಾಂಕಿನ ಗುಂತಾವಣಿಯು 215 ಕೋಟಿ 28 ಲಕ್ಷವಾಗಿದೆ. ಬ್ಯಾಂಕಿನ ನಿವ್ವಳ ಎನ್.ಪಿ.ಎ. ಪ್ರಮಾಣವು ನಿರಂತರವಾಗಿ ಹಲವು ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿಯೇ ಮುಂದುವರಿದಿದೆ. ಆದಾಯಕರ ಪಾವತಿಯ ನಂತರ ವರ್ಷಾಂತ್ಯಕ್ಕೆ ಬ್ಯಾಂಕು 3 ಕೋಟಿ 47 ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಎದುರಾದ ಆರ್ಥಿಕ ಸಂಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿ ಲಾಭ ಗಳಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.
ಬ್ಯಾಂಕಿನ ಸ್ವಂತ ಬಂಡವಾಳವು 60 ಕೋಟಿ ರೂ. ದಾಟಿದ್ದು, ಬ್ಯಾಂಕಿನ ದುಡಿಯುವ ಬಂಡವಾಳವು 479 ಕೋಟಿ 95 ಲಕ್ಷವಾಗಿದೆ. ವರದಿ ವರ್ಷದಲ್ಲಿ ಬ್ಯಾಂಕು ಒಟ್ಟು 634 ಕೋಟಿ ರೂ. ವ್ಯವಹಾರವನ್ನು ಮಾಡಿದ್ದು, ಭಾರತೀಯ ಬ್ಯಾಂಕಿಂಗ್ ಉದ್ದಿಮೆಯು ಆರ್ಥಿಕ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಸಹ, ನಮ್ಮ ಬ್ಯಾಂಕು ಪ್ರಗತಿಯತ್ತ ಸಾಗುವಲ್ಲಿ ಮುನ್ನೆಡೆದಿದೆ.
ಬ್ಯಾಂಕು ಆಧುನಿಕ ತಂತ್ರಜ್ಞಾನದೊಂದಿಗೆ ತ್ವರಿತ ಬ್ಯಾಂಕಿಂಗ್ ಸೇವೆಯನ್ನು ಗ್ರಾಹಕರಿಗೆ ನೀಡುವಲ್ಲಿ ಮಂಚೂಣಿಯಲ್ಲಿದ್ದು, ತ್ವರಿತ ಹಣ ವರ್ಗಾವಣೆ ಮಾಡಲು RTGS/NEFT ಸೌಲಭ್ಯ, ಖಾತೆಯ ವ್ಯವಹಾರವನ್ನು ತಿಳಿದುಕೊಳ್ಳಲು SMS Alert ಸೌಲಭ್ಯ, ವಿದೇಶದಿಂದ ಹಣ ವರ್ಗಾವಣೆ ಮಾಡಲು HOST to HOST facility ದೇಶದ ಯಾವುದೇ ATM ಬಳಸಿ ಹಣ ಪಡೆಯಲು RuPay ATM Card ನೀಡುವ ಸೌಲಭ್ಯವನ್ನು ಒದಗಿ ಸುತ್ತಿದೆ. ಅದಲ್ಲದೆ ಇತ್ತೀಚಿನ ತಂತ್ರಜ್ಞಾನ ಸೇವೆಗಳಾದ PoS ವ್ಯವಹಾರ ಸೌಲಭ್ಯ e-com, NACH ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ. ಬ್ಯಾಂಕಿನ ಎಲ್ಲಾ ಶಾಖೆಗಳು ಸುಸಜ್ಜಿತ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ವ್ಯವಹಾರವನ್ನು ನಡೆಸುತ್ತಿದ್ದು, ಬ್ಯಾಂಕಿನ 4 ಶಾಖೆಗಳು, ವ್ಯವಹರಿಸುವ ಶಾಖಾ ಕಟ್ಟಡದಲ್ಲೇ ATM ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ.
ಬ್ಯಾಂಕಿನ ಉತ್ತಮ ಸಾಧನೆಗೆ ಬ್ಯಾಂಕಿನ ಶೇರುದಾರರು, ಗ್ರಾಹಕರು, ಹಿತೈಷಿಗಳ ಸಹಕಾರ ಹಾಗೂ ಪ್ರೋತ್ಸಾಹ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಅವಿರತ ಪರಿಶ್ರಮವೇ ಕಾರಣ. ಬ್ಯಾಂಕ್ ನೀಡುತ್ತಿರುವ ಆಧುನಿಕ ಸೇವೆಗಳನ್ನು ಬ್ಯಾಂಕಿನ ಗ್ರಾಹಕರು ಪಡೆದುಕೊಂಡು ಬ್ಯಾಂಕು ಇನ್ನೂ ಹೆಚ್ಚಿನ ಉನ್ನತಿಯನ್ನು ಹೊಂದಿ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವಲ್ಲಿ ಸಫಲವಾಗಲಿ ಎಂಬ ಆಶಯವನ್ನು ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ಅವರು ಪ್ರಕಟಣೆಯಲ್ಲಿ ವ್ಯಕ್ತಪಡಿಸಿರುತ್ತಾರೆ.