×
Ad

Who Killed Judge Loya?

Update: 2018-04-10 19:07 IST

ಮುಂಬೈ, ಎ.10: ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲೋಯ ಅವರ ನಿಗೂಢ ಸಾವಿನ ಹಿಂದಿರುವವರನ್ನು ಬಯಲಿಗೆಳೆಯಬೇಕೆಂದು ಆಗ್ರಹಿಸಿ ಮುಂಬೈಯಲ್ಲಿ ಸಾಮಾಜಿಕ ಕಾರ್ಯಕರ್ತರ ತಂಡವೊಂದು ವಿಶಿಷ್ಟವಾಗಿ ಜನಜಾಗೃತಿ ಅಭಿಯಾನ ನಡೆಸಿ ಗಮನ ಸೆಳೆದಿದೆ. ಈ ತಂಡ Who Killed Judge Loya ( ನ್ಯಾ. ಲೋಯ ಅವರನ್ನು ಕೊಂದಿದ್ದು ಯಾರು?) ಎಂಬ ಪ್ರಶ್ನೆಯನ್ನು ಮುದ್ರಿಸಿರುವ ಟೀಶರ್ಟ್ ಧರಿಸಿ ಮುಂಬೈ ಯ ಲೋಕಲ್ ಟ್ರೇನು ಗಳಲ್ಲಿ ಪ್ರಯಾಣಿಸಿ ಜನರ ಗಮನ ಸೆಳೆದಿದ್ದಾರೆ. 

ನ್ಯಾ. ಲೋಯ ಪ್ರಕರಣದ ಕುರಿತು 'ಕಾರವಾನ್ ಮ್ಯಾಗಝಿನ್' ಪ್ರಕಟಿಸಿರುವ ಸರಣಿ ತನಿಖಾ ವರದಿಗಳಿಂದ ಇಡೀ ಪ್ರಕರಣದ ಕುರಿತು ಹಲವಾರು ಗಂಭೀರ ಪ್ರಶ್ನೆಗಳು, ಸಂದೇಹಗಳು ಎದ್ದಿವೆ. ಅವರ ಸಾವು ಸಹಜವಲ್ಲ ಎಂಬ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಯಾಗಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿದ್ದವರು ನ್ಯಾ. ಲೋಯ. ಅವರ ಸಾವಿನ ಕುರಿತ ಪ್ರಕರಣ  ಈಗ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು, ಇದರ ತನಿಖೆ ಸುಪ್ರೀಂ ಕೋರ್ಟ್ ನ ಇತಿಹಾಸದಲ್ಲೇ ನ್ಯಾಯಾಧೀಶರುಗಳು ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಸಿತ್ತು. 
ಆದರೆ ಇಷ್ಟೆಲ್ಲಾ ರಾದ್ಧಾಂತ ಆದರೂ ಪ್ರಮುಖ ಟಿವಿ ಚಾನಲ್ ಗಳು ಹಾಗು ರಾಷ್ಟ್ರೀಯ ದಿನಪತ್ರಿಕೆಗಳು ಈ ಬಗ್ಗೆ ವಿವರವಾಗಿ ವರದಿ ಪ್ರಕಟಿಸುವ, ಪ್ರಶ್ನೆ ಕೇಳುವ ಗೋಜಿಗೆ ಹೋಗಿಲ್ಲ ಎಂಬ ದೂರು ವ್ಯಾಪಕವಾಗಿದೆ.

ಮುಂಬೈ ಯ ಲೇಖಕ , ಸಾಮಾಜಿಕ ಕಾರ್ಯಕರ್ತ ವಿನೋದ್ ಚಂದ್ ಕಳೆದ ಕೆಲವು ತಿಂಗಳುಗಳಿಂದ ಲೋಯ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನಜಾಗೃತಿ ಮೂಡಿಸಲು ನಿರಂತರ ಶ್ರಮಿಸುತ್ತಿದ್ದಾರೆ. ನ್ಯಾ. ಲೋಯ ಅವರ ಸಾವಿನ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾದ್ದು ಈಗ ಇಡೀ ದೇಶಕ್ಕೆ ಅತ್ಯಂತ ಮುಖ್ಯವಾಗಿದೆ ಎಂಬುದು ಅವರ ಕಾಳಜಿ. ಅದಕ್ಕಾಗಿ ಅವರು ವಿವಿಧ ವೇದಿಕೆಗಳಲ್ಲಿ ಈ ಪ್ರಶ್ನೆಯನ್ನು ಎತ್ತುತ್ತಲೇ ಇದ್ದಾರೆ. 

ಕೆಲವು ಸಮಯದ ಹಿಂದೆ ವಿನೋದ್ ಚಂದ್ ಹಾಗು ಅವರ ಮಿತ್ರರು  Who Killed Judge Loya ಎಂದು ಮುದ್ರಿಸಿರುವ ಟೀಶರ್ಟ್ ಧರಿಸಿ ಮುಂಬೈ ಹೈಕೋರ್ಟ್ ಮುಂದೆ ನಿಂತುಕೊಂಡಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಾರಿ ವಿನೋದ್ ಹೊಸ ರೀತಿಯಲ್ಲಿ ಅಭಿಯಾನ ನಡೆಸಿದ್ದಾರೆ. Who Killed Judge Loya ಎಂದು ಮುದ್ರಿಸಿರುವ ಟೀಶರ್ಟ್ ಧರಿಸಿ ಮುಂಬೈ ಲೋಕಲ್ ಟ್ರೇನುಗಳಲ್ಲಿ ವಿನೋದ್ ಹಾಗು ಅವರ ಮಿತ್ರರು ಪ್ರಯಾಣಿಸಿದ್ದಾರೆ. ಅಂಧೇರಿ, ದಾದರ್, ಚರ್ಚ್ ಗೇಟ್ ಮತ್ತಿತರ ಕಡೆ ಈ ತಂಡ ಹೋಗಿದೆ. ಪೊಲೀಸರು ಬಂದ ಕೂಡಲೇ ನಿಂತಲ್ಲಿಂದ ಇನ್ನೊಂದು ಕಡೆ ಹೋಗುವ ಈ ತಂಡ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಖ್ಯಾತ ಪತ್ರಕರ್ತ ರವೀಶ್  ಕುಮಾರ್ , " ಮಾಧ್ಯಮಗಳು ಈ ಪ್ರಮುಖ ವಿಷಯ ಚರ್ಚಿಸಲು ಹಿಂಜರಿದಿದ್ದು, ಈಗ ಜನರೇ ಮಾಧ್ಯಮವಾಗಿದ್ದಾರೆ. ತಾವೇ ಪತ್ರಿಕೆಗಳಾಗಿ, ಲೈವ್ ಚಾನಲ್ ಗಳಾಗಿ ಟ್ರೇನುಗಳಲ್ಲಿ ಪ್ರಯಾಣಿಸಿದ್ದಾರೆ. ನ್ಯಾ. ಲೋಯ ಕುರಿತ ಸುದ್ದಿಗಳಾಗಿ ಜನರನ್ನು ತಲುಪಿದ್ದಾರೆ. ಇದು ಪ್ರತಿಭಟನೆಯ ವಿನೂತನ, ಪರಿಣಾಮಕಾರಿ ಅಸ್ತ್ರ" ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News