×
Ad

ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಟಿಕೆಟ್ ವಿರೋಧಿಸಿ ಕಿಶೋರ್‌ಕುಮಾರ್ ಸೇರಿ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ

Update: 2018-04-10 20:46 IST

ಉಡುಪಿ, ಎ.10: ಕಾರ್ಯಕರ್ತರ ವಿರೋಧದ ಹೊರತಾಗಿಯೂ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸ್ಪರ್ಧಿಸಲು ಟಿಕೆಟ್ ನೀಡಿರುವುದನ್ನು ವಿರೋಧಿಸಿ, ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕಿಶೋರ್ ಕುಮಾರ್ ಮತ್ತವರ ಆರು ಮಂದಿ ಸಂಗಡಿಗರು ತಾವು ಹೊಂದಿದ್ದ ಜಿಲ್ಲಾ ಬಿಜೆಪಿ ಪದಾಧಿಕಾರಿ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

ಇದರಿಂದ ಕುಂದಾಪುರದಲ್ಲಿ ಈಗಾಗಲೇ ಒಡೆದ ಬಣವಾಗಿದ್ದ ಬಿಜೆಪಿ ಪಕ್ಷಕ್ಕೆ ಇದು ಇನ್ನೊಂದು ಆಘಾತವಾಗಿದೆ. 1999ರಿಂದ ಸತತ ಮೂರು ಬಾರಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದು, 2013ರಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರನಾಗಿ ನಿಂತು ಗೆದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಎರಡು ತಿಂಗಳ ಹಿಂದೆ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡು ಐದನೇ ಬಾರಿಗೆ ಸ್ಪರ್ಧಿಸಲು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಹಾಲಾಡಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಆರಂಭದಿಂದಲೂ ವಿರೋಧಿಸುತಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ನೇತೃತ್ವದ ಮೂಲ ಬಿಜೆಪಿಗರ ಬಣ, ತಮ್ಮ ವಿರೋಧವನ್ನೂ ಲೆಕ್ಕಿಸದೇ ಹಾಲಾಡಿ ಶೆಟ್ಟರಿಗೆ ಟಿಕೆಟ್ ಕೊಟ್ಟ ಬಿಜೆಪಿಗೆ ಮಂಗಳವಾರ ಬಲವಾದ ಎದಿರೇಟು ನೀಡಿದ್ದಾರೆ. ಕಿಶೋರ್ ಕುಮಾರ್ 2013ರಲ್ಲಿ ಹಾಲಾಡಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು.

ಇಂದು ಕಿಶೋರ್ ಕುಮಾರ್ ಮತ್ತು ಇತರ 6 ಮಂದಿ ಪಕ್ಷದ ಜಿಲ್ಲಾ ಮಟ್ಟದ ನಾಯಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾತ್ರವಲ್ಲ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಹಾಲಾಡಿ ಅವರ ಪರವಾಗಿ ಕುಂದಾಪುರ ಕ್ಷೇತ್ರದಲ್ಲಿ ಮತಪ್ರಚಾರ ನಡೆಸದೇ ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದಾರೆ.

ಕಿಶೋರ್ ಕುಮಾರ್ ಸೇರಿದಂತೆ ಏಳು ಮಂದಿ ಪದಾಧಿಕಾರಿಗಳು ಇಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ಅವರ ಮಟ್ಟಾರು ನಿವಾಸದಲ್ಲಿ ಭೇಟಿಯಾಗಿ ಪಕ್ಷದ ಹುದ್ದೆಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜೀನಾಮೆ ಸಲ್ಲಿಸಿದವರಲ್ಲಿ ಕಿಶೋರ್‌ಕುಮಾರ್ ಅಲ್ಲದೇ, ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮೇರ್ಡಿ ಸತೀಶ್ ಹೆಗ್ಡೆ, ಚಂದ್ರಮೋಹನ್ ಪೂಜಾರಿ, ರವೀಂದ್ರ ದೊಡ್ಮನೆ, ಐರೋಡಿ ವಿಠಲ ಪೂಜಾರಿ ಹಾಗೂ ಶ್ರೀನಿವಾಸ ಕುಂದರ್ ಸೇರಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈ ಬಾರಿಯೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಕಿಶೋರ್ ಕುಮಾರ್, ಬಿಜೆಪಿಗೆ ಗೆಲ್ಲುವವರಷ್ಟೇ ಬೇಕು, ಪಕ್ಷದ ಸಿದ್ಧಾಂತವನ್ನು ಪಾಲಿಸುವವರು ಬೇಡ ಎನ್ನುವುದು ಹಾಲಾಡಿ ಶೆಟ್ಟರಿಗೆ ಟಿಕೆಟ್ ನೀಡುವ ಮೂಲಕ ಸ್ಪಷ್ಟವಾಗಿದೆ ಎಂದು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತ ಪಡಿಸಿದರು.

‘ಸದ್ಯಕ್ಕೆ ನಾವು ಪಕ್ಷದ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಕುಂದಾಪುರದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯೇ ಸರಿಯಾಗಿಲ್ಲ. ತಮಗೆ ಮಂತ್ರಿ ಪದವಿ ಸಿಕ್ಕಿಲ್ಲ ಎಂದು ಪಕ್ಷ ಬಿಟ್ಟು ಹೋದ, ಈಗ ಚುನಾವಣೆ ಬಂದಾಗ ಟಿಕೆಟ್ ಬೇಕು ಎಂದು ಪಕ್ಷಕ್ಕೆ ಹಿಂದಕ್ಕೆ ಬಂದ ಹಾಲಾಡಿ ಶೆಟ್ಟರಿಗೆ ಟಿಕೆಟ್ ನೀಡಿದ್ದು, ಕುಂದಾಪುರದಲ್ಲಿ ಹಾಲಾಡಿ ಶೆಟ್ಟರ ಬೆಂಬಲಿಗರ ಉಪಟಳದ ನಡುವೆಯೂ ಪಕ್ಷವನ್ನು ಉಳಿಸಿದ ನಮ್ಮಂತಹವರಿಗೆ ಸಹಜವಾಗಿಯೇ ನೋವಾಗಿದೆ’ ಎಂದವರು ವಿವರಿಸಿದರು.

ನಾನೂ ಆಕಾಂಕ್ಷಿ

ಕಳೆದ ಬಾರಿ ಚುನಾವಣೆಗೆ ಮೊದಲೇ ಹಾಲಾಡಿ ಶೆಟ್ಟರು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಆಗ ಪಕ್ಷ ತನ್ನ ಮೇಲೆ ತೀವ್ರ ಒತ್ತಡ ಹೇರಿ ಕುಂದಾಪುರಕ್ಕೆ ಬಿಜೆಪಿಯ ಅಭ್ಯರ್ಥಿಯನ್ನಾಗಿ ಮಾಡಿತು. ಆಗ ನಾನು ಸ್ಪರ್ಧಾಕಾಂಕ್ಷಿಯೇ ಆಗಿರಲಿಲ್ಲ, ಮಾತ್ರವಲ್ಲ ಗೆಲ್ಲುವ ಭರವಸೆಯೂ ಇರಲಿಲ್ಲ ಎಂದವರು ಹೇಳಿದರು.

ಆದರೇ ಈಗ ಹಾಗಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟರು ಮತ್ತವರ ಬೆಂಬಲಿಗರ ವಿರೋಧದ ನಡುವೆಯೂ ಪಕ್ಷವನ್ನು ಉಳಿಸಿದ್ದೇವೆ. ಜನರ ಅಭಿಪ್ರಾಯ ಪಡೆದಿದ್ದೇವೆ. ಈಗ ಗೆಲ್ಲುವ ಸ್ಥಿತಿಗೆ ಪಕ್ಷವನ್ನು ತಂದಿಟ್ಟಿದ್ದೇವೆ. ಆದ್ದರಿಂದ ಸಹಜವಾಗಿಯೇ ನಾನು ಈ ಬಾರಿ ಪ್ರಬಲ ಅಭ್ಯರ್ಥಿಯಾಗಿದ್ದೆ, ಪಕ್ಷಕ್ಕೆ ಬೇಡಿಕೆಯನ್ನೂ ಸಲ್ಲಿಸಿದ್ದೆ ಎಂದು ಕಿಶೋರ್ ಕುಮಾರ್ ಹೇಳಿದರು.

ನಾವು ವಿರೋಧಿಸುತ್ತಿದ್ದವರಿಗೆ ಟಿಕೆಟ್ ಸಿಕ್ಕಿದ ಮೇಲೆ ಪಕ್ಷದ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ. ಹೀಗಾಗಿ ಹುದ್ದೆಗೆ ರಾಜೀನಾಮೆ ನೀಡಿದ್ದೇವೆ. ಆದರೇ ಪಕ್ಷದಲ್ಲಿಯೇ ಮುಂದುವರಿಯುತ್ತೇವೆ. ಕುಂದಾಪುರ ಬಿಟ್ಟು ಜಿಲ್ಲೆಯ ಇತರ 4 ಕ್ಷೇತ್ರಗಳಿಗೂ ಸಕ್ರಿಯವಾಗಿ ಚುನಾವಣಾ ಪ್ರಚಾರಕ್ಕೆ ಹೋಗುತ್ತೇವೆ ಎಂದವರು ಹೇಳಿದರು.

ಶೀಘ್ರವೇ ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಒಂದು ನಿರ್ಧಾರಕ್ಕೆ ಬರಲಿದ್ದೇವೆ. ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಹಾಲಾಡಿ ಪರ ಪ್ರಚಾರಕ್ಕೆ ಹೋಗುವುದಿಲ್ಲ. ಇಲ್ಲಿ ತಟಸ್ಥರಾಗಿರುತ್ತೇವೆ. ಯಾವುದೇ ಪರ್ಯಾಯ ಅಭ್ಯರ್ಥಿಗಳನ್ನೂ ನಿಲ್ಲಿಸುವುದಿಲ್ಲ ಅಥವಾ ಬೇರೆ ಪಕ್ಷದ ಅಭ್ಯರ್ಥಿಯನ್ನು ಸಹ ಬೆಂಬಲಿಸುವುದಿಲ್ಲ ಎಂದರು.

ರಾಜೀನಾಮೆ ಅಂಗೀಕಾರ ಇಲ್ಲ: ಮಟ್ಟಾರು

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಪಕ್ಷದ ಕುಂದಾಪುರದ ಕೆಲ ಪದಾಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಅದನ್ನು ಈಗ ಅಂಗೀಕರಿಸುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ.

ರಾಜೀನಾಮೆ ನೀಡಿದವರ ಜೊತೆಗೆ ಮಾತುಕತೆ ನಡೆಸಿ, ಗೊಂದಲವನ್ನು ಬಗೆಹರಿಸುತ್ತೇವೆ. ಅವರೆಲ್ಲರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಹಾಲಾಡಿ ಅವರ ಪರ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ, ಹಾಲಾಡಿ ಅವರ ಜಯದಲ್ಲಿ ಇವರ ಪಾತ್ರವೂ ಇರುತ್ತದೆ ಎನ್ನುವ ನಂಬಿಕೆ ನನಗಿದೆ ಎಂದವರು ಹೇಳಿದ್ದಾರೆ.

ಪಕ್ಷದಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸರ್ವೆ ಆಗಿದೆ, ಅದರ ಆಧಾರದಲ್ಲಿ ಮತ್ತು ಪಕ್ಷದ ನಾಯಕರ ಅಭಿಪ್ರಾಯವನ್ನು ಪಡೆದು ಹಾಲಾಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಅದನ್ನು ಬದಲಾಯಿಸುವುದಕ್ಕಾಗುವುದಿಲ್ಲ ಎಂದು ಮಟ್ಟಾರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News