ಬ್ಯಾಂಕ್ ವಂಚನೆ:ವಡೋದರಾ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ

Update: 2018-04-10 16:09 GMT

ಅಹ್ಮದಾಬಾದ್,ಎ.10: ವಿವಿಧ ಬ್ಯಾಂಕುಗಳಿಗೆ 2,654.40 ಕೋ.ರೂ.ಗಳನ್ನು ವಂಚಿಸಿರುವ ವಡೋದರಾದ ಡೈಮಂಡ್ ಪವರ್ ಇನ್‌ಫ್ರಾಸ್ಟ್ರಕ್ಚರ್ ಲಿ. (ಡಿಪಿಐಎಲ್) ಕಂಪನಿ ಮತ್ತು ಅದರ ಪ್ರವರ್ತಕರಿಗೆ ಸೇರಿದ ಸ್ಥಳಗಳಲ್ಲಿ ಮಂಗಳವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಕಂಪನಿಯ ಕಾರ್ಪೊರೇಟ್ ಕಚೇರಿ ಸೇರಿದಂತೆ ನಗರದಲ್ಲಿಯ ಮತ್ತು ಸುತ್ತುಮುತ್ತಲಿನ 17 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಐಟಿ ಅಧಿಕಾರಿಯೋರ್ವರು ತಿಳಿಸಿದರು.

ಎಸ್.ಎನ್ ಭಟ್ನಾಗರ್, ಪುತ್ರರಾದ ಅಮಿತ್ ಭಟ್ನಾಗರ್ ಮತ್ತು ಸುಮಿತ್ ಭಟ್ನಾಗರ್ ಅವರು ವಿದ್ಯುತ್ ಕೇಬಲ್‌ಗಳು ಮತ್ತು ಉಪಕರಣಗಳನ್ನು ತಯಾರಿಸುವ ಡಿಪಿಐಎಲ್‌ನ ಪ್ರವರ್ತಕರಾಗಿದ್ದಾರೆ.

ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸೋಮವಾರವಷ್ಟೇ ಕಂಪನಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಗಳನ್ನು ನಡೆಸಿತ್ತು. ಇದಕ್ಕೂ ಮುನ್ನ ಕಳೆದ ವಾರ ಸಿಬಿಐ ದಾಳಿ ನಡೆಸಿ ಶೋಧ ಕಾರ್ಯಾಚರಣೆಗಳನ್ನು ಕೈಗೊಂಡಿತ್ತು.

ಕಂಪನಿಯು ಸರಿಯಾದ ಲೆಕ್ಕಪತ್ರಗಳನ್ನು ಇಟ್ಟಿದೆಯೇ ಮತ್ತು ಹಣಕಾಸು ಅಕ್ರಮಗಳ ಮೂಲಕ ತೆರಿಗೆ ವಂಚನೆಯನ್ನು ನಡೆಸಿದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಐಟಿ ಇಲಾಖೆಯ ದಾಳಿಗಳ ಉದ್ದೇಶವಾಗಿದೆ ಎಂದು ಅಧಿಕಾರಿ ತಿಳಿಸಿದರು.

ಡಿಪಿಐಎಲ್ 2008ರಿಂದ 11 ಬ್ಯಾಂಕ್‌ಗಳ ಕೂಟದಿಂದ ಸಾಲಗಳನ್ನು ಪಡೆದು ಕೊಂಡು 2016,ಜೂ.29ಕ್ಕೆ ಇದ್ದಂತೆ 2,654.40 ಕೋ.ರೂ.ಸಾಲವನ್ನು ಬಾಕಿಯಿರಿಸಿದ್ದು, 2016-17ರಲ್ಲಿ ಇದನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News