ದೇಶದ ಮೊದಲ ಸರ್ವವಿದ್ಯುತ್ ಸೂಪರ್‌ಫಾಸ್ಟ್ ರೈಲಿಗೆ ಪ್ರಧಾನಿ ಚಾಲನೆ
ಮೋತಿಹಾರಿ(ಬಿಹಾರ),ಎ.10: ಮಾಧೇಪುರಾ ಎಲೆಕ್ಟ್ರಿಕ್ ಲೋಕೊಮೋಟಿವ್ ಫ್ಯಾಕ್ಟರಿಯಲ್ಲಿ ನಿರ್ಮಾಣಗೊಂಡ ದೇಶದ ಮೊದಲ ಸರ್ವವಿದ್ಯುತ್ ರೈಲ್ವೆ ಇಂಜಿನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹಸಿರು ನಿಶಾನೆ ತೋರಿಸಿದರು. ಇದು ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ ಫ್ರಾನ್ಸ್‌ನ ಅಲ್‌ಸ್ಟಾಮ್ ಪೂರ್ಣಗೊಳಿಸಿರುವ ಮೊದಲ ಬೃಹತ್ ಯೋಜನೆಯಾಗಿದೆ.
12,000 ಅಶ್ವಶಕ್ತಿಯನ್ನು ಹೊಂದಿರುವ ಈ ವಿದ್ಯುತ್ ಚಾಲಿತ ಇಂಜಿನ್ ಪ್ರತಿ ಗಂಟೆಗೆ ಗರಿಷ್ಠ 120 ಕಿ.ಮೀ.ವೇಗದಲ್ಲಿ ಚಲಿಸಲಿದೆ ಎಂದು ಅಲ್‌ಸ್ಟಾಮ್ ತಿಳಿಸಿದೆ.
ಮಾರ್ಚ್,2020ರೊಳಗೆ ಸಿದ್ಧಗೊಳ್ಳಲಿರುವ 40 ಇಂಜಿನ್‌ಗಳ ಪೈಕಿ ಇದು ಮೊದಲನೆಯದಾಗಿದೆ.
ಅಲ್‌ಸ್ಟಾಮ್ ಜೊತೆಗೆ ಮಾಡಿಕೊಳ್ಳಲಾಗಿರುವ ಒಪ್ಪಂದದಂತೆ ಭಾರತವು ಮುಂದಿನ 11 ವರ್ಷಗಳಲ್ಲಿ 20,000 ಕೋ.ರೂಗಳ ವೆಚ್ಚದಲ್ಲಿ ಇಂತಹ 800 ಇಂಜಿನ್‌ಗಳನ್ನು ಪಡೆಯಲಿದೆ.
ಸರ್ವವಿದ್ಯುತ್ ಇಂಜಿನ್‌ಗಳು ರೈಲ್ವೆಯ ನಿರ್ವಹಣೆ ವೆಚ್ಚಗಳನ್ನು ಕಡಿಮೆಗೊಳಿಸುವ ಜೊತೆಗೆ ವಾಯುಮಾಲಿನ್ಯವನ್ನೂ ತಗ್ಗಿಸಲಿವೆ.
ಮಹಾತ್ಮಾ ಗಾಂಧಿಯವರ ಚಂಪಾರಣ್ ಸತ್ಯಾಗ್ರಹದ 100ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೋತಿಹಾರಿಗೆ ಆಗಮಿಸಿದ್ದ ಮೋದಿ ಅವರು, 2401ಕೋ.ರೂ. ವೆಚ್ಚದ ಮುಝಫ್ಫರಪುರ-ಸಗಾವ್ಲಿ ಮತ್ತು ಸಗಾವ್ಲಿ-ವಾಲ್ಮೀಕಿನಗರ ವಿಭಾಗಗಳ ನಡುವೆ ಜೋಡಿ ರೈಲು ಮಾರ್ಗ ಯೋಜನೆಗಳಿಗೆ ಶಿಲಾನ್ಯಾಸವನ್ನು ನೆರವೇರಿಸಿದರು, ಜೊತೆಗೆ ಕಥಿಹಾರ್-ಹಳೆಯ ದಿಲ್ಲಿ ನಡುವೆ ಚಂಪಾರಣ್ ಹಮ್‌ಸಫರ್ ರೈಲಿನ ಮೊದಲ ಸಂಚಾರಕ್ಕೆ ಹಸಿರು ನಿಶಾನೆಯನ್ನು ತೋರಿಸಿದರು.
ಭಾರತೀಯ ರೈಲ್ವೆ ಮತ್ತು ಅಲ್‌ಸ್ಟಾಮ್ ನಡುವೆ ಜಂಟಿ ಉದ್ಯಮವಾಗಿರುವ ಮಾಧೇಪುರಾ ಇಂಜಿನ್ ನಿರ್ಮಾಣ ಫ್ಯಾಕ್ಟರಿಯ ಮೊದಲ ಹಂತವನ್ನೂ ಅವರು ಲೋಕಾರ್ಪಣೆಗೊಳಿಸಿದರು.ಇದು ವಾರ್ಷಿಕ 110 ಇಂಜಿನ್ ತಯಾರಿಕೆಯ ಸಾಮರ್ಥ್ಯವನ್ನು ಹೊಂದಿದೆ.