×
Ad

ಉಡುಪಿ: ಶಿಕ್ಷಕಿಯ ಮರುನೇಮಕಕ್ಕೆ ಒತ್ತಾಯ

Update: 2018-04-10 22:00 IST

ಉಡುಪಿ, ಎ.10: ಉಡುಪಿ ಪೆರಂಪಳ್ಳಿ ಪರಿಸರದ ಖಾಸಗಿ ಆಂಗ್ಲಮಾಧ್ಯಮ ಶಾಲೆಯೊಂದರ ಶಿಕ್ಷಕಿಯೊಬ್ಬರಿಗೆ ಶಾಲೆಯ ಪ್ರಾಂಶುಪಾಲರು ಮಾನಸಿಕ ಕಿರುಕುಳ ನೀಡುತಿದ್ದಾರೆ ಎಂಬ ಆರೋಪ ಕೇಳಿಬಂದು ಶಾಲೆಯ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಶೃತಿ ಎಂಬವರು ಕಳೆದ ಒಂದು ವರ್ಷದಿಂದ ಈ ಶಾಲೆಯಲ್ಲಿ 2ನೇ ತರಗತಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತಿದ್ದು, ಶನಿವಾರ ಶಾಲೆ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಅವರು ಕೆಲಸಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರೆನ್ನಲಾಗಿದೆ. ಆದರೆ ಶೃತಿ ಕೆಲಸ ರಾಜೀನಾಮೆ ನೀಡಲು ನಿರಾಕರಿಸಿದ್ದು, ಮಂಗಳವಾರ ಶಾಲೆಗೆ ಬಂದಾಗ ಪ್ರವೇಶ ನಿರಾಕರಿಸಲಾಗಿತ್ತು. ವಿಷಯ ತಿಳಿದ ಕೆಲವು ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಶೃತಿ ಅವರನ್ನು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಪರಿಸ್ಥಿತಿ ಕೈಮೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಪೊಲೀಸರನ್ನು ಕರೆಸಿದರು.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಕುರಿಯನ್, ಶಿಕ್ಷಕಿ ಶೃತಿಯ ಬಗ್ಗೆ ವಿದ್ಯಾರ್ಥಿಗಳ ಹೆತ್ತವರು ಅತೃಪ್ತಿ ವ್ಯಕ್ತಪಡಿಸಿದ್ದು, ಆದ್ದರಿಂದ ಆಕೆಗೆ ಎ.5ರಿಂದ ಕೆಲಸಕ್ಕೆ ರಾಜೀನಾಮೆ ನೀಡುವಂತೆ ತಿಳಿಸಲಾಗಿದೆ. ಕಾನೂನು ಪ್ರಕಾರ ನಾವು ಹೋಗುತ್ತೇವೆ ಎಂದರು. ಹೆತ್ತವರ ಅತೃಪ್ತಿ ಬಗ್ಗೆ ವಿವರ ನೀಡಲು ನಿರಾಕರಿಸಿದ ಅವರು ಬೇಕಿದ್ದರೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳಿ ಎಂದರು.

ಮುಖ್ಯೋಪಾಧ್ಯಾಯರು ಕಳೆದ ಕೆಲವು ದಿನಗಳಿಂದ ಕೆಲಸ ಬಿಡುವಂತೆ ಒತ್ತಡ ಹೇರುತ್ತಿದ್ದಾರೆ. ಬೇರೆ ಶಿಕ್ಷಕಿಯರನ್ನು ಕೂಡ ತೆಗೆದು ಹಾಕಿದ್ದಾರೆ. ಅವರು ಕ್ರಿಶ್ಚಿಯನ್ ಶಿಕ್ಷಕಿಯರನ್ನು ನೇಮಿಸಿ ಶಿಕ್ಷಣ ಸಂಸ್ಥೆಯಲ್ಲಿ ಕ್ರಿಶ್ಚಿಯಾನಿಟಿ ಮಾಡುತ್ತಿದ್ದಾರೆ ಎಂದು ಶಿಕ್ಷಕಿ ಶೃತಿ ಆರೋಪಿಸಿದರು. ಬಳಿಕ ಪೊಲೀಸರ ಮಧ್ಯಪ್ರವೇಶ ದಿಂದ ಪರಿಸ್ಥಿತಿ ತಿಳಿಯಾಯಿತು.

ದೂರು ಬಂದಿಲ್ಲ: ಪೊಲೀಸರು
ಪ್ರಕರಣದ ಕುರಿತು ಪೊಲೀಸ್ ಠಾಣೆಗೆ ಯಾವುದೇ ದೂರು ಬಂದಿಲ್ಲ. ಸಂಘಟನೆಯವರು ಶಾಲೆಯತ್ತ ಬರುವ ಮಾಹಿತಿ ಬಂದ ಕಾರಣ ಮಧ್ಯ ಪ್ರವೇಶಿಸಲಾಗಿದೆ. ಶಿಕ್ಷಕಿ ಕಳೆದೊಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿ ದ್ದರು. ಕೆಲಸಕ್ಕೆ ಬೇಡವೆಂದು ನೊಟೀಸು ಕಳುಹಿಸಿದ್ದನ್ನು ಶಿಕ್ಷಕಿ ಸ್ವೀಕರಿಸಿರಲಿಲ್ಲ. ಆಡಳಿತ ಮಂಡಳಿ ಮುಂಬೈಯಲ್ಲಿದೆ. ನಾನೊಬ್ಬನೇ ತೀರ್ಮಾನ ಕೈಗೊಳ್ಳಲು ಬರುವುದಿಲ್ಲ. ಅವರೊಂದಿಗೆ ಮಾತನಾಡಿಕೊಂಡು ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾಗಿ ಮಣಿಪಾಲ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News