ಟ್ರಂಪ್‌ರ ಖಾಸಗಿ ವಕೀಲನ ಕಚೇರಿ ಮೇಲೆ ಎಫ್‌ಬಿಐ ದಾಳಿ
ವಾಶಿಂಗ್ಟನ್, ಎ. 10: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ದೀರ್ಘಾವಧಿಯ ಖಾಸಗಿ ವಕೀಲ ಮೈಕಲ್ ಕೋಹನ್‌ರ ಕಚೇರಿ ಮತ್ತು ಹೊಟೇಲ್ ಕೋಣೆಗೆ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ (ಎಫ್‌ಬಿಐ) ಸೋಮವಾರ ದಾಳಿ ನಡೆಸಿದೆ.
ನೀಲಿ ಚಿತ್ರಗಳ ತಾರೆಯೊಬ್ಬರು ಟ್ರಂಪ್‌ರೊಂದಿಗೆ ಹೊಂದಿರುವ ಸಂಬಂಧದ ಬಗ್ಗೆ ಬಾಯಿಬಿಡದಂತೆ ಅವರಿಗೆ ತಾನು ಹಣ ನೀಡಿರುವುದನ್ನು ಈ ವಕೀಲರು ಒಪ್ಪಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.
ದಾಳಿಯ ವೇಳೆ, ವಿವಿಧ ವಿಷಯಗಳಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಎಫ್‌ಬಿಐ ಅಧಿಕಾರಿಗಳು ಕೋಹನ್‌ರ ಕಚೇರಿಯಿಂದ ತೆಗೆದುಕೊಂಡು ಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ.
2016ರ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗೆ ಪೂರ್ವಭಾವಿಯಾಗಿ, ನೀಲಿಚಿತ್ರಗಳ ನಟಿ ಸ್ಟಾರ್ಮೀ ಡೇನಿಯಲ್ಸ್‌ಗೆ ವಕೀಲ ಕೋಹನ್ ನೀಡಿರುವ 1,30,000 ಡಾಲರ್ (ಸುಮಾರು 85 ಲಕ್ಷ ರೂಪಾಯಿ)ಗೆ ಸಂಬಂಧಿಸಿದ ದಾಖಲೆಪತ್ರಗಳು ಎಫ್‌ಬಿಐ ಅಧಿಕಾರಿಗಳು ವಶಪಡಿಸಿಕೊಂಡ ದಾಖಲೆಗಳಲ್ಲಿವೆ.
ಮ್ಯಾನ್‌ಹಟನ್‌ನ ರಾಕ್‌ಫೆಲರ್ ಪ್ಲಾಝಾದಲ್ಲಿರುವ ಕೋಹನ್‌ರ ಕಚೇರಿ ಮತ್ತು ಹೊಟೇಲ್ ಕೋಣೆಗಳ ಮೇಲೆ ಎಫ್‌ಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆ ನವೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕೋಹನ್ ಕುಟುಂಬ ಸಮೇತ ಹೊಟೇಲ್ ಕೋಣೆಯಲ್ಲಿ ತಂಗಿದ್ದಾರೆ.
ದ್ವೇಷಸಾಧನೆ: ಟ್ರಂಪ್ ಆಕ್ರೋಶ
ತನ್ನ ಖಾಸಗಿ ವಕೀಲನ ಕಚೇರಿ ಮತ್ತು ನಿವಾಸದ ಮೇಲೆ ಎಫ್‌ಬಿಐ ನಡೆಸಿದ ದಾಳಿಗೆ ಕೋಪದಿಂದ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತನ್ನ ವಿರುದ್ಧ ದ್ವೇಷಸಾಧನೆ ಮಾಡಲಾಗುತ್ತಿದೆ ಎಂದು ಬಣ್ಣಿಸಿದ್ದಾರೆ.
2016ರ ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲಿ ಟ್ರಂಪ್ ಚುನಾವಣಾ ಪ್ರಚಾರ ತಂಡವು ರಶ್ಯದೊಂದಿಗೆ ನಂಟು ಹೊಂದಿತ್ತು ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ರಾಬರ್ಟ್ ಮುಲ್ಲರ್ ವಿರುದ್ಧ ಟ್ರಂಪ್ ಈ ಹಿಂದೆಯೂ ‘ದ್ವೇಷ ಸಾಧನೆ’ (ವಿಚ್ ಹಂಟಿಂಗ್) ಎಂಬ ಪದವನ್ನು ಹಲವು ಬಾರಿ ಬಳಸಿದ್ದಾರೆ.