ಉತ್ತರ ಪ್ರದೇಶ: ಅತ್ಯಾಚಾರ ಸಂತ್ರಸ್ತೆಯ ತಂದೆಯ ದೇಹದ ಮೇಲೆ 14 ಗಾಯಗಳ ಗುರುತು

Update: 2018-04-10 17:16 GMT

ಲಕ್ನೋ, ಎ.10: ಬಿಜೆಪಿ ಶಾಸಕ ತನ್ನ ಮೇಲೆ ಅತ್ಯಾಚಾರಗೈದಿದ್ದಾನೆ ಎಂದು ಆರೋಪಿಸಿದ್ದ ಯುವತಿಯ ತಂದೆಯು ಆಘಾತ ಹಾಗು ನೆತ್ತರ ನಂಜಿನಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ಇವರ ದೇಹದಾದ್ಯಂತ 14 ಗಾಯದ ಗುರುತುಗಳಿವೆ ಎಂದು ವರದಿಯಲ್ಲಿದೆ. 

ಅವರ ದೇಹದಲ್ಲಿ ಥಳಿತದಿಂದುಂಟಾದ 14 ಗಾಯಗಳ ಗುರುತು ಕಂಡು ಬಂದಿದೆ ಎಂದು ವರದಿ ಹೇಳಿದೆ. "50 ವರ್ಷದ ನನ್ನ ತಂದೆಯನ್ನು ಬಿಜೆಪಿ ಶಾಸಕ, ಆತನ ಸಹೋದರ ಹಾಗೂ ಇತರರು ಬರ್ಬರವಾಗಿ ಥಳಿಸಿದರು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಿಲ್ಲ. ಆದರ ಬದಲಾಗಿ ಬಂಧಿಸಿ ಕಸ್ಟಡಿಯಲ್ಲಿ ಇರಿಸಲಾಯಿತು" ಎಂದು ಪಪ್ಪು ಸಿಂಗ್ ಯಾದವ್ ಅವರ ಪುತ್ರಿ, ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಹೆಸರು ನಾಪತ್ತೆ

ಈ ಪ್ರಕರಣಕ್ಕೆ ಸಂಬಂಧಿಸಿ ಕೈಬರಹದ ದೂರು ಹಾಗೂ ಪ್ರಥಮ ಮಾಹಿತಿ ವರದಿ ತಿರುಚಲಾಗಿದೆ ಎಂದು ಯುವತಿ ಹಾಗೂ ಅವರ ಕುಟುಂಬ ಆರೋಪಿಸಿದೆ. ದಾಳಿಯ ಕುರಿತು ಕುಟುಂಬ ನೀಡಿದ ದೂರಿನಲ್ಲಿ ಜೈದೀಪ್ ಸಿಂಗ್ ಹಾಗೂ ಇತರರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ, ಪೊಲೀಸರು ರೂಪಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಜೈದೀಪ್ ಸಿಂಗ್‌ನ ಹೆಸರನ್ನು ಕೈಬಿಡಲಾಗಿದೆ ಎಂದು ಯುವತಿ ಹಾಗೂ ಕುಟುಂಬ ಆರೋಪಿಸಿದೆ.

ಸಿಟ್ ರಚನೆ:  ಯುವತಿಯ ಅತ್ಯಾಚಾರ, ತಂದೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗಾರ್, ಅವರ ಸಹೋದರ ಅತುಲ್ ಸಿಂಗ್ ಹಾಗೂ ಇತರರ ವಿರುದ್ಧ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರೂಪಿಸಲಾಗಿದೆ ಎಂದು ಡಿಜಿಪಿ ಒ.ಪಿ. ಸಿಂಗ್ ಹೇಳಿದ್ದಾರೆ.

ಎನ್‌ಎಚ್‌ಆರ್‌ಸಿ ನೋಟಿಸ್

ಪಪ್ಪು ಸಿಂಗ್ ಅವರ ಕಸ್ಟಡಿ ಸಾವಿಗೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಉತ್ತರಪ್ರದೇಶ ಸರಕಾರ ಹಾಗೂ ಪೊಲೀಸ್ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ಎಫ್‌ಐಆರ್ ದಾಖಲಿಸಲು ನಿರಾಕರಿಸಿರುವ ಕರ್ತವ್ಯಭ್ರಷ್ಟ ಪೊಲೀಸರು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ವಿವರ ವರದಿ ನೀಡುವಂತೆ ಸೂಚಿಸಿ ಎನ್‌ಎಚ್‌ಆರ್‌ಸಿ ಉತ್ತರಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಕಸ್ಟಡಿ ಸಾವಿನ ಬಗ್ಗೆ 24 ಗಂಟೆ ಒಳಗಡೆ ಆಯೋಗಕ್ಕೆ ಮಾಹಿತಿ ನೀಡಿದಿರುವ ಬಗ್ಗೆ ವಿವರಣೆ ನೀಡುವಂತೆ ಹಾಗೂ ಎಲ್ಲ ವರದಿಗಳನ್ನು ಪ್ರತಿಕ್ರಿಯೆಯೊಂದಿಗೆ ನಾಲ್ಕು ವಾರಗಳ ಒಳಗೆ ನೀಡುವಂತೆ ಕೂಡ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News