×
Ad

ಉನ್ನಾವೊ ಅತ್ಯಾಚಾರ ಪ್ರಕರಣ : ತಪ್ಪೊಪ್ಪಿಗೆ ಪತ್ರ ನೀಡಲು ಒತ್ತಡ ; ಸಂತ್ರಸ್ತೆಯ ದೂರು

Update: 2018-04-11 20:22 IST

ಲಕ್ನೊ, ಎ.11: ಭದ್ರತೆ ಒದಗಿಸುವ ನಿಟ್ಟಿನಲ್ಲಿ ತನ್ನನ್ನು ಹಾಗೂ ಕುಟುಂಬದವರನ್ನು ಹೋಟೆಲ್ ಕೋಣೆಯಲ್ಲಿ ಜಿಲ್ಲಾಡಳಿತ ಇರಿಸಿದೆ. ಆದರೆ ಅಲ್ಲಿ ತನಗೆ ಕುಡಿಯಲು ನೀರು ಕೂಡಾ ನೀಡದೆ, ಹೊರಗೆ ಹೋಗಲೂ ಬಿಡದೆ ನಿರ್ಬಂಧಿಸಲಾಗಿದೆ. ಈ ಕೋಣೆಯಲ್ಲಿ ಫೋನ್ ಅಥವಾ ಟಿವಿ ಇಲ್ಲ. ಮೊಬೈಲ್ ಚಾರ್ಜ್ ಮಾಡಿಕೊಳ್ಳಲೂ ವ್ಯವಸ್ಥೆಯಿಲ್ಲ. ತಪ್ಪೊಪ್ಪಿಗೆ ಪತ್ರ ಬರೆದುಕೊಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು 16ರ ಹರೆಯದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ತಿಳಿಸಿದ್ದಾಳೆ.

 ನಾವು ಹೊರಗೆ ಹೋಗಬಾರದು ಎಂದು ಸೂಚಿಸಿದ್ದಾರೆ. ಹೋಟೆಲ್‌ನ ಎಲ್ಲೆಡೆ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ನಮಗೆ ಸಹಾಯ ಮಾಡಿ ಎಂದು ವಿನಂತಿಸಿದರೆ ಅದು ತಮ್ಮ ಕೆಲಸವಲ್ಲ ಎಂದು ನಿರಾಕರಿಸಿದ್ದಾರೆ. ಇದು ನ್ಯಾಯವೇ ಎಂದು ಯುವತಿ ಪ್ರಶ್ನಿಸಿದ್ದಾಳೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಕುಟುಂಬವು ಮಾಖಿ ಗ್ರಾಮಕ್ಕೆ ಮರಳುವುದಿಲ್ಲ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಶಾಸಕ ಹಾಗೂ ಆತನ ಸಹಚರರು ಮತ್ತೊಂದು ದುಷ್ಕೃತ್ಯಕ್ಕೆ ಯೋಜನೆ ಹಾಕಿಕೊಂಡಿರಬಹುದು. ನಮಗೆ ಸಹಾಯ ಮಾಡಲು ಊರಿನಲ್ಲಿ ಯಾರು ಕೂಡಾ ಮುಂದೆ ಬರುತ್ತಿಲ್ಲ. ಶಾಸಕ ಹಾಗೂ ಆತನ ಕುಟುಂಬದವರ ವಿರುದ್ಧ ಧ್ವನಿ ಎತ್ತಲು ಯಾರಿಗೂ ಧೈರ್ಯವಿಲ್ಲ. ಗ್ರಾಮದಲ್ಲಿ ಪ್ರಮುಖ ಹುದ್ದೆಗಳಲ್ಲಿ ಶಾಸಕನ ಕುಟುಂಬದವರೇ ಇದ್ದಾರೆ ಎಂದು ಸಂತ್ರಸ್ತೆಯ ತಾಯಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆದರೆ ಸಂತ್ರಸ್ತೆಯ ಕುಟುಂಬ ಭಯಪಡುವ ಅಗತ್ಯವಿಲ್ಲ. ಕುಟುಂಬಕ್ಕೆ ಪೂರ್ಣ ರಕ್ಷಣೆ ನೀಡಲಾಗುವುದು ಎಂದು ಲಕ್ನೊ ಎಡಿಜಿ ರಾಜೀವ್ ಕೃಷ್ಣ ತಿಳಿಸಿದ್ದಾರೆ.

ಈ ಕುಟುಂಬದವರ ಸಂಬಂಧಿಕರು ದಿಲ್ಲಿಯಲ್ಲಿದ್ದಾರೆ. ಇವರು ಬಯಸಿದರೆ ಅಲ್ಲಿಗೆ ತೆರಳುವ ವ್ಯವಸ್ಥೆ ಮಾಡಲಾಗುವುದು. ಎಲ್ಲಿ ವಾಸಿಸಬೇಕೆಂಬುದು ಅವರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಅವರು ತಿಳಿಸಿದ್ದಾರೆ. ವಿಶೇಷ ತನಿಖಾ ತಂಡ(ಎಸ್‌ಐಟಿ) ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿರುವ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಕೋರಿಕೆಯನ್ನು ಅವರು ತಳ್ಳಿಹಾಕಿದ್ದು ಬುಧವಾರ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದ ಯುವತಿ ಬಳಿಕ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ನಿವಾಸದೆದುರು ಆತ್ಮಹತ್ಯೆಗೆ ಯತ್ನಿಸಿದ್ದಳು. ಅತ್ಯಾಚಾರ ದೂರನ್ನು ಹಿಂಪಡೆಯಲು ನಿರಾಕರಿಸಿದ ಈಕೆಯ ತಂದೆಯ ಮೇಲೆ ಕುಲ್‌ದೀಪ್ ಸಿಂಗ್‌ನ ಬೆಂಬಲಿಗರು ತೀವ್ರವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದ್ದು ಅವರನ್ನು ಪೊಲೀಸರು ಬಂಧಿಸಿದ್ದರು. ಮರುದಿನ ಅವರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು.

ಮಂಪರು ಪರೀಕ್ಷೆಗೆ ಆಗ್ರಹ

 ಈ ಮಧ್ಯೆ, ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್‌ರನ್ನು ಭೇಟಿ ಮಾಡಿರುವ ಆರೋಪಿ ಶಾಸಕ ಕುಲ್‌ದೀಪ್ ಸಿಂಗ್ ಸೇನ್‌ಗರ್ ಪತ್ನಿ ಸಂಗೀತಾ ಸೇನ್‌ಗರ್, ತನ್ನ ಪತಿಯ ನಿರ್ದೋಷಿತ್ವ ಸಾಬೀತುಪಡಿಸಲು ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಉನ್ನಾವೊ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯೂ ಆಗಿರುವ ಸಂಗೀತಾ, ಈ ಪ್ರಕರಣದ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ದೂರಿದ್ದಾರೆ. ತನ್ನ ಪತಿಯನ್ನು ಹಾಗೂ ಸಂತ್ರಸ್ತೆ ಯುವತಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ ಸತ್ಯ ಹೊರಬರುತ್ತದೆ. ತಮ್ಮ ಕುಟುಂಬದವರಿಗೆ ಮಾನಸಿಕ ಪೀಡನೆ ನೀಡಲಾಗುತ್ತಿದೆ. ಮಕ್ಕಳಿಗೆ ಆಘಾತವಾಗಿದೆ. ಯಾವುದೇ ಸಾಕ್ಷ್ಯ ಇಲ್ಲದಿದ್ದರೂ ಕೇವಲ ದೂರಿನ ಆಧಾರದಲ್ಲಿ ತನ್ನ ಪತಿಯನ್ನು ಅತ್ಯಾಚಾರಿ ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳಿರುವ ಅವರು, ತನ್ನ ಪತಿ ದೋಷಿ ಎಂದು ಸಾಬೀತಾದರೆ ಇಡೀ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News