ಶತಮಾನ ಕಂಡ ಹಿರಿಯಡ್ಕ ಗೋಪಾಲರಾಯರಿಗೆ ಸನ್ಮಾನ
ಉಡುಪಿ, ಎ.11: ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ ತನ್ನ ಸ್ಥಾಪನೆಯ 60ನೇ ವರ್ಷಾಚರಣೆಯನ್ನು ‘ಅರ್ವತ್ತರ ಅರ್ಪಣೆ’ ಯಾಗಿ ಎ.14ರಿಂದ 19ರವರೆಗೆ ಜಿಲ್ಲೆಯ ವಿವಿದೆಡೆಗಳಲ್ಲಿ ಆಚರಿಸಲಿದೆ ಎಂದು ಸಂಘದ ಅಧ್ಯಕ್ಷ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಡೆಕಾರ್, ಜಿಲ್ಲೆಯ ಐದು ಸ್ಥಳಗಳಲ್ಲಿ ಮಂಡಳಿಯ ಕಲಾವಿದರು ಕಲಾರಸಿಕರಿಗೆ ಆರು ಯಕ್ಷಗಾನ ಪ್ರದರ್ಶನಗಳನ್ನು ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳು ಅಂಬಲಪಾಡಿಯ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆಯಲಿದೆ ಎಂದರು.
ಉಳಿದಂತೆ ಶಿರ್ವದ ಬಸ್‌ನಿಲ್ದಾಣದ ಬಳಿ, ಹಂಗಾರಕಟ್ಟೆ ಯಕ್ಷಗಾನ ಕೇಂದ್ರ, ಮಂದಾರ್ತಿ ದೇವಸ್ಥಾನದ ಮುಂಭಾಗ, ಬ್ರಹ್ಮಾವರದ ಬಸ್‌ನಿಲ್ದಾಣದ ಸಮೀಪ ಪ್ರದರ್ಶನಗಳು ಸಂಪನ್ನಗೊಳ್ಳಲಿದೆ. ದಿನಕ್ಕೊಬ್ಬರಂತೆ ಆರು ಮಂದಿ ಹವ್ಯಾಸಿ ಯಕ್ಷಗಾನ ಕಲಾವಿದರಾದ ನಾರಾಯಣ ಪ್ರಭು ಗುಳ್ಮೆ, ಕೆ.ಜಿ ಮಂಜುನಾಥ, ಶಶಿಕಲಾ ಎಂ ಪ್ರಭು, ರತ್ನಾಕರ ಆಚಾರ್ಯ, ಎಚ್. ಸುಜಯೀಂದ್ರ ಹಂದೆ ಮತ್ತು ಕೃಷ್ಣಮೂರ್ತಿ ತುಂಗ ಇವರಿಗೆ 60ರ ಪುರಸ್ಕಾರ ಅರ್ಪಿಸಲಾಗುವುದು ಎಂದು ಮುರಲಿ ಕಡೆಕಾರ್ ತಿಳಿಸಿದರು.
‘ಅರ್ವತ್ತರ ಅರ್ಪಣೆ’ಯನ್ನು ಎ.14ರ ಶನಿವಾರ ಸಂಜೆ 6:30ಕ್ಕೆ ಅಂಬಲಪಾಡಿ ನಿ.ಬೀ.ಅಣ್ಣಾಜಿ ಬಲ್ಲಾಳ್ ವೇದಿಕೆಯಲ್ಲಿ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದಾರೆ. ಡಾ. ನಿ.ಬೀ ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ನೂರರ ಹರೆಯದ ಹಿರಿಯ ಮದ್ದಲೆ ವಾದಕ ಗುರು ಹಿರಿಯಡ್ಕ ಗೋಪಾಲ್ ರಾಯರಿಗೆ 60,000 ರೂ.ಗಳ ಹಮ್ಮಿಣಿಯೊಂದಿಗೆ ಅರವ್ತರ ಸಮ್ಮಾನ ಅರ್ಪಿಸಲಾಗುವುದು. ಇದರೊಂದಿಗೆ ಮಂಡಳಿಯ ಮೂವರು ಹಿರಿಯ ಸದಸ್ಯ, ಕಲಾವಿದರಾದ ಎ. ರಾಘವೇಂದ್ರ ಉಪಾಧ್ಯ, ಕೆ.ಎಸ್ ಗೋಪಾಲಕೃಷ್ಣ ಭಟ್ ಮತ್ತು ತಮ್ಮಯ್ಯ ಶೇರಿಗಾರ್ ಅವರಿಗೆ 60ರ ಗೌರವಾರ್ಪಣೆ ಮಾಡಲಾಗುವುದು ಎಂದರು.
ಸಮಾರೋಪ ಸಮಾರಂಭವು ಅಂಬಲಪಾಡಿ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಎ.19ರಂದು ಸಂಜೆ 6:30ಕ್ಕೆ ಡಾ.ನಿ.ಬೀ ವಿಜಯಬಲ್ಲಾಳರ ಅಧ್ಯಕ್ಷತೆಯಲ್ಲಿ ಜರಗಲಿದೆ. ಮಂಡಳಿಯ ಪ್ರತಿಭಾನ್ವಿತ ಹಿಂದಿನ ಕಲಾವಿದರಾದ ಅನಂತಪದ್ಮನಾ ಭಟ್, ಅರವಿಂದ ಶೆಟ್ಟಿಗಾರ್, ಕೆ. ಬಾಲಕೃಷ್ಣ ಟ್, ಮಾಧವ ಕೆ., ಶೇಖರ ಶೆಟ್ಟಿಗಾರ್ ಹಾಗೂ ಕುತ್ಪಾಡಿ ವಿಠಲ ಗಾಣಿಗರಿಗೆ 60ರ ಅಭಿನಂದನೆ ಸಲ್ಲಿಸಲಾಗುವುದು.
ಪ್ರತಿದಿನ ಸಂಜೆ 6:30ರಿಂದ 9:30ರವರೆಗೆ ನಡೆಯುವ ಯಕ್ಷಗಾನ ಪ್ರದರ್ಶನದಲ್ಲಿ ಮಂಡಳಿಯ ಕಲಾವಿದರು ಅನುಕ್ರಮವಾಗಿ ಜಾಂಬವತಿ ಕಲ್ಯಾಣ, ಶ್ವೇತಕುಮಾರ ಚರಿತ್ರೆ, ತಾಮ್ರಧ್ವಜ ಕಾಳಗ, ತುಳಸೀ ಜಲಂಧರ, ಕವಿರತ್ನ ಕಾಳಿದಾಸ ಹಾಗೂ ಸುದರ್ಶನ ವಿಜಯ ಯಕ್ಷಗಾನ ಪ್ರಸಂಗಗಳನ್ನು ಆಡಿತೋರಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಕಲಾಮಂಡಳಿಯ ಕಾರ್ಯದರ್ಶಿ ಕೆ.ಜೆ.ಕೃಷ್ಣ, ಉಪಾಧ್ಯಕ್ಷ ಕೆ.ಅಜಿತ್ ಕುಮಾರ್, ಕೆ.ಜೆ.ಗಣೇಶ್ ಹಾಗೂ ಪ್ರವೀಣ್‌ಉಪಾಧ್ಯ ಉಪಸ್ಥಿತರಿದ್ದರು.