ಕ್ರಿಮಿನಲ್‌ಗಳಿಗೆ ಮಣೆ ಹಾಕುತ್ತಿರುವ ಬಿಜೆಪಿ: ಫಡ್ನವೀಸ್ ಸರಕಾರದ ವಿರುದ್ಧ ಶಿವಸೇನೆ ಕಿಡಿ
ಮುಂಬೈ, ಎ.12: ಮಹಾರಾಷ್ಟ್ರದ ಅಹ್ಮದ್‌ನಗರ್‌ನಲ್ಲಿ ಕಳೆದ ವಾರ ಇಬ್ಬರು ಸ್ಥಳೀಯ ಶಿವಸೇನಾ ನಾಯಕರ ಹತ್ಯೆಯ ಹಿನ್ನೆಲೆಯಲ್ಲಿ ಪಕ್ಷದ ಮುಖವಾಣಿಯಾದ ಸಾಮ್ನಾ ಮಹಾರಾಷ್ಟ್ರದ ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಕಿಡಿಕಾರಿದೆ ಹಾಗೂ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದಾಗ ರಾಜ್ಯದಲ್ಲಿ ಗೃಹಸಚಿವರ ಅಸ್ತಿತ್ವದಲ್ಲಿದ್ದಾರೆಯೇ ಎಂದವರು ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಘಟನೆಗಳನ್ನು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಪ್ರಸ್ತಾಪಿಸಿದ್ದು, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ವಿಫಲಗೊಂಡಿರುವುದಕ್ಕೆ ಉಜ್ವಲ ನಿದರ್ಶನ ಇದಾಗಿದೆಯೆಂದವರು ಹೇಳಿದ್ದಾರೆ.
2014ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲಾಭವನ್ನು ಪಡೆಯುವುದಕ್ಕಾಗಿ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳನ್ನು ಬಿಜೆಪಿಯು ತನ್ನ ತೆಕ್ಕೆಗೆತೆಗೆದುಕೊಳ್ಳುತ್ತಿದೆಯೆಂದು ಸಾಮ್ನಾ ಸಂಪಾದಕೀಯವು ಖಂಡಿಸಿದೆ.
‘‘ ಈ ಗೂಂಡಾಗಳಿಗೆ ಯಾರು ಕುಮ್ಮಕ್ಕು ನೀಡುತ್ತಿದ್ದಾರೆ ಹಾಗೂ ಅವರನ್ನು ಯಾರು ದೃಢವಾಗಿ ಬೆಂಬಲಿಸುತ್ತಿದ್ದಾರೆಂಬುದು ಈಗ ಮಹಾರಾಷ್ಟ್ರದ ಜನತೆಗೆ ಅರಿವಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಮತ್ತೆ ಬರುವುದನ್ನು ಖಾತರಿಪಡಿಸುವ ಸಲುವಾಗಿ ಬಿಜೆಪಿ ನಾಯಕರು ಈ ಕ್ರಿಮಿನಲ್ ಹಿನ್ನೆಲೆಯ ಚುನಾಯಿತ ಪ್ರತಿನಿಧಿಗಳ ಮುಂದೆ ಮಂಡಿಯೂರಿದ್ದಾರೆ ಎಂದು ಅದು ಟೀಕಿಸಿದೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಡಲು ಬಿಜೆಪಿ ಕಾರಣವೆಂದು ಅದು ಆಪಾದಿಸಿದೆ.
ಇಬ್ಬರು ಶಿವಸೇನಾ ನಾಯಕರ ಹತ್ಯೆಗಾಗಿ ಅಹ್ಮದ್‌ನಗರ ಜಿಲ್ಲೆಯ ಸ್ಥಳೀಯ ಬಿಜೆಪಿ ಶಾಸಕ ಶಿವಾಜಿ ಕಾರ್ಡಿಲೆ ಬಂಧಿತರಾಗಿದ್ದಾರೆ. ಅವರ ಪುತ್ರ ಸಂಗ್ರಾಮ್ ಜಗತಾಪ್ ಹಾಗೂ ಅವರ ತಂದೆ ಅರುಣ್ ಜಗತಾಪ್ (ಇಬ್ಬರೂ ಎನ್‌ಸಿಪಿ ನಾಯಕರು) ಕೂಡಾ ಈ ಪ್ರಕರಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಜೈಲು ಸೇರಿದ್ದಾರೆ ಎಂದು ಅದು ಹೇಳಿದೆ.
ಕಳೆದ ವಾರ ನಡೆದ ಅಹ್ಮದ್ ನಗರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಶಿವಸೇನಾ ಅಭ್ಯರ್ಥಿಗಳ ನಡುವೆ ಭುಗಿಲೆದ್ದ ರಾಜಕೀಯ ವೈಮನಸ್ಸೇ, ಇಬ್ಬರು ಶಿವಸೇನೆ ಕಾರ್ಯಕರ್ತರ ಹತ್ಯೆಗೆ ಕಾರಣವೆಂದು ಸಂಶಯಿಸಲಾಗಿದೆ. ಶಿವಸೇನೆ ಅಧಿಕಾರಕ್ಕೆ ಬಾರದಂತೆ ತಡೆಯಲು ಬಿಜೆಪಿಯು ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಕೈಜೋಡಿಸಿರುವುದಾಗಿ ಶಿವಸೇನೆ ಆರೋಪಿಸಿತ್ತು.
ಬಿಜೆಪಿ ಅಧ್ಯಕ್ಷ ಅಮಿತ್‌ಶಾ ಅವರು ತನ್ನ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಹಾವು,ಮುಂಗುಸಿ, ನಾಯಿ ಹಾಗೂ ಬೆಕ್ಕುಗಳಿಗೆ ಹೋಲಿಸಿದ್ದರು. ಈಗ ಅದೇ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಈ ಪ್ರಾಣಿಗಳಿಗೆ ಆಶ್ರಯ ನೀಡುತ್ತಿವೆ ಹಾಗೂ ಅವು ಕಾನೂನು ಮತ್ತು ಶಿಸ್ತಿಗೆ ಬೆದರಿಕೆಯಾಗಿ ಪರಿಣಮಿಸಿವೆ. ಅಹ್ಮದ್‌ನಗರದಲ್ಲಿ ನಡೆದ ಹತ್ಯೆಗಳು ರಾಜ್ಯದ ವರ್ಚಸ್ಸಿಗೆ ಕಳಂಕ ತಂದಿವೆ.
ಶಿವಸೇನಾ ಮುಖವಾಣಿ ಸಾಮ್ನಾ