×
Ad

ಜಮ್ಮು- ಕಾಶ್ಮೀರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ : ಪೊಲೀಸರು ಮುಚ್ಚಿಹಾಕಿದ್ದು ಹೇಗೆ ?

Update: 2018-04-11 21:33 IST

►ಅತ್ಯಾಚಾರ ಆರೋಪಿಗಳ ಪರ ನಿಂತ ಬಿಜೆಪಿ ಸಚಿವರು !

ಹೊಸದಿಲ್ಲಿ, ಎ.11 :  ಜಮ್ಮುವಿನ ಕಥುವಾದಲ್ಲಿ ನಡೆದಿರುವ ಎದೆ ಝಲ್ಲೆನಿಸುವ ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಹಾಗು ಭೀಬತ್ಸ ಕೊಲೆ ಪ್ರಕರಣದಲ್ಲಿ  ಜಮ್ಮು ಕಾಶ್ಮೀರ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿರುವ ವಿವರಗಳನ್ನು ಓದಿದರೆ ಇಂತಹ ಕಲ್ಲು ಹೃದಯವೂ ಒಮ್ಮೆಗೆ ನಡುಗಿಬಿಡುತ್ತದೆ. 

ಅದರ ವಿವರ ಇಲ್ಲಿದೆ : 
ಬಖೆರ್‌ವಾಲ್ ಮುಸ್ಲಿಂ ಅಲೆಮಾರಿ ಗುಂಪನ್ನು ಜಮ್ಮು ಸಮೀಪದ ಕಥುವಾ ರಸನ ಗ್ರಾಮದಿಂದ ಓಡಿಸುವ ಸಲುವಾಗಿ ಈ ಪೈಶಾಚಿಕ ಪ್ರಕರಣ ನಡೆದಿದೆ. ಇದಕ್ಕಾಗಿ ಮೊದಲು ಬಾಲಕಿಯನ್ನು ಅಪಹರಿಸಿ ಸ್ಥಳೀಯ ದೇವಸ್ಥಾನ ಅಥವಾ ಪ್ರಾರ್ಥನಾ ಮಂದಿರದಲ್ಲಿ ಇಡಲಾಗಿದೆ. ಅಲ್ಲಿ ಪ್ರಕರಣದ ರೂವಾರಿ  (ಬಲಿದಾನದ ) ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಎಂಟು ವರ್ಷದ ಬಾಲಕಿಯ ಮೇಲೆ ಮೂರು ಬಾರಿ ದೇವಸ್ಥಾನ ಅಥವಾ ಪ್ರಾರ್ಥನಾ ಮಂದಿರದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಒಬ್ಬ ಅತ್ಯಾಚಾರಿಯನ್ನು ಆತನ ಕಾಮದಾಸೆಯನ್ನು ತೃಪ್ತಿಪಡಿಸುವ ಸಲುವಾಗಿ ಮೀರಠ್‌ನಿಂದ ಕರೆಸಲಾಗಿತ್ತು. ಬಾಲಕಿಗೆ ನಿದ್ದೆಗುಳಿಗೆ ನೀಡಿ, ಹೊಡೆದು, ಆಕೆ ಸತ್ತಿದ್ದಾಳೆ ಎಂದು ಖಾತ್ರಿಪಡಿಸಿಕೊಳ್ಳಲು ತಲೆಯ ಮೇಲೆ ಎರಡು ಬಾರಿ ಕಲ್ಲಿನಿಂದ ಜಜ್ಜಲಾಗಿದೆ. ಇದಕ್ಕೂ ಮುನ್ನ ಮತ್ತೊಬ್ಬ ಆರೋಪಿ ಹಾಗೂ ಪೊಲೀಸ್, ಇತರ ಆರೋಪಿಗಳನ್ನು ಕುರಿತು, "ತಡೆಯಿರಿ; ನಾನೂ ಕೊನೆಯ ಬಾರಿಗೆ ಆಕೆಯನ್ನು ಭೋಗಿಸಬೇಕು" ಎಂದು ಹೇಳಿದ್ದ.
 
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆಯ ಅಪರಾಧ ವಿಭಾಗ ಸೋಮವಾರ ಸಲ್ಲಿಸಿದ 18 ಪುಟಗಳ ಆರೋಪಟ್ಟಿಯ ಈ ತುಣುಕುಗಳು ಕರುಳು ಚುರುಕ್ ಎನಿಸುವಂಥವು. ಜನವರಿ 10ರಂದು ಮನೆಯ ಸಮೀಪದಿಂದ ಕಾಣೆಯಾಗಿದ್ದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಅಪರಾಧ ವಿಭಾಗ ಈ ಆರೋಪಪಟ್ಟಿ ಸಲ್ಲಿಸಿದೆ. ನಾಪತ್ತೆಯಾಗಿದ್ದ ಬಾಲಕಿಯ ಶವ ಏಳು ದಿನಗಳ ಬಳಿಕ ಪಕ್ಕದ ಕಾಡಿನಲ್ಲಿ ಪತ್ತೆಯಾಗಿತ್ತು.

ಇದಾದ ಕೆಲ ದಿನಗಳ ಬಳಿಕ ಆರೋಪಿಗಳು, ಬಾಲಕಿಯನ್ನು ಎಲ್ಲಿ ಇಡಲಾಗಿತ್ತು ಎಂಬ ಮಾಹಿತಿ ಇದ್ದ ಸ್ಥಳೀಯ ಪೊಲೀಸರಿಗೆ 1.5 ಲಕ್ಷ ರೂಪಾಯಿ ಲಂಚ ನೀಡಿ, ಆರಂಭಿಕ ಹಂತದಲ್ಲಿ ಅಪರಾಧ ಪ್ರಕರಣವನ್ನು ಮುಚ್ಚಿ ಹಾಕುವಂತೆ ಸೂಚಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

ಅತ್ಯಾಚಾರ , ಕೊಲೆ ಆರೋಪಿಗಳ ಬೆಂಬಲಕ್ಕೆ ನಿಂತ ಬಿಜೆಪಿ ಸಚಿವರು !

ಈ ಹತ್ಯೆ ಪ್ರಕರಣ ಜಮ್ಮು ಕಾಶ್ಮೀರದಲ್ಲಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಬಖೇರ್‌ವಾಲ್ ಸಮುದಾಯದದ ತೀವ್ರ ಪ್ರತಿಭಟನೆ ಬಳಿಕ ಸರ್ಕಾರ ಈ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿತ್ತು. ಆರೋಪಿಗಳ ಪರ ಬೆಂಬಲಕ್ಕಾಗಿ ರಾಜಕಾರಣಿಗಳು ಹಿಂದೂ ಏಕತಾ ಮಂಚ್ ಎಂಬ ಸಂಘಟನೆ ಹುಟ್ಟುಹಾಕಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ಖಟೂವಾದಲ್ಲಿ ಕೋಮು ಬಣ್ಣ ಪಡೆದುಕೊಂಡಿತ್ತು. ಮಂಚ್‌ಗೆ ಬೆಂಬಲ ಸೂಚಿಸಿದವರಲ್ಲಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಸಂಪುಟದ ಬಿಜೆಪಿ ಸಚಿವರಾದ ಲಾಲ್ ಸಿಂಗ್ ಹಾಗೂ ಚಂದ್ರ ಪ್ರಕಾಶ್ ಗಂಗಾ ಸೇರಿದ್ದರು.

ಆರೋಪಪಟ್ಟಿಯ ಪ್ರಕಾರ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ರೂವಾರಿ ನಿವೃತ್ತ ಕಂದಾಯ ಅಧಿಕಾರಿ ಸಂಜಿರಾಮ್. ಈತ ಬಂಧಿತ ಎಂಟು ಆರೋಪಿಗಳ ಪೈಕಿ ಒಬ್ಬ. ಈತನ ಮಗ ವಿಶಾಲ್ ಜನಗೋತ್ರ ಹಾಗೂ ಬಾಲಾಪರಾಧಿ ಅಳಿಯನನ್ನು ಕೂಡಾ ಬಂಧಿಸಲಾಗಿದೆ.

ಅತ್ಯಾಚಾರಿಗಳಿಗೆ ಪೋಲೀಸರ ಸಾಥ್ !

ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜೂರಿಯಾ ಹಾಗೂ ಸುರೇಂದ್ರ ಕುಮಾರ್, ರಸಾನ ನಿವಾಸಿ ಪರ್ವೇಶ್ ಕುಮಾರ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಆನಂದ್ ದತ್ತಾ ಹಾಗೂ ಮುಖ್ಯಪೇದೆ ತಿಲಕ್‌ರಾಜ್ ಅವರನ್ನೂ ಈ ಪ್ರಕರಣದಲ್ಲಿ ಅಪರಾಧ ವಿಭಾಗ ಬಂಧಿಸಿದೆ. ರಾಜ್ ಹಾಗೂ ದತ್ತಾ ಅವರನ್ನು ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ.

"ಬಾಲಕಿಯ ತಂದೆ ಮುಹಮ್ಮದ್ ಯೂಸುಫ್ ಜನವರಿ 12ರಂದು ಹೀರಾನಗರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕುದುರೆಗಳನ್ನು ಮೇಯಿಸಲು ಜನವರಿ 10ರಂದು ಮಧ್ಯಾಹ್ನ 12.30ರ ಸುಮಾರಿಗೆ ಪಕ್ಕದ ಅರಣ್ಯಕ್ಕೆ ಹೋಗಿದ್ದ ಬಾಲಕಿ ವಾಪಸ್ಸಾಗಿಲ್ಲ ಎಂದು ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿ ರಾಮ್‌ನ ಅಳಿಯನನ್ನು ಬಂಧಿಸಲಾಗಿತ್ತು. ಈ ಹಂತದಲ್ಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಬಖೇರ್‌ವಾಲ್ ಸಮುದಾಯ ಆಪಾದಿಸಿತ್ತು. ಜನವರಿ 22ರಂದು ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ" ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ. ಪ್ರಮುಖ ಆರೋಪಿ ರಾಮ್, ಎಸ್‌ಪಿಓ ಖಜೂರಿಯಾ ಹಾಗೂ ಬಾಲಾಪರಾಧಿಯನ್ನು ಈ ಪಿತೂರಿಯಲ್ಲಿ ಶಾಮೀಲಾಗಿಸಿ, ಪ್ರತ್ಯೇಕವಾಗಿ ಹಾಗೂ ವೈಯಕ್ತಿಕವಾಗಿ ಕೆಲಸಗಳನ್ನು ನಿಯೋಜಿಸಿದ್ದ ಎಂದು ಹೇಳಲಾಗಿದೆ.

"...ದೀಪಕ್ ತನ್ನ ಸ್ನೇಹಿತ ವಿಕ್ರಮ್ ಜತೆಗೆ ಜನವರಿ 7ರಂದು ಸಂಜೆ ಕೊಟ್ಟಾಹ್ ಮೋರ್ ಔಷಧಿ ಅಂಗಡಿಗೆ ತೆರಳಿ, ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಮಾವನ ಔಷಧಿಚೀಟಿಯನ್ನು ತೋರಿಸಿ 0.5 ಮಿಲಿಗ್ರಾಂನ 10 ಎಪಿಥ್ರಿಲ್ ಗುಳಿಗೆಗಳನ್ನು ಖರೀದಿಸಿದ್ದ. ಇದು ಬಿಟ್ಟು ಔಷಧ ಅಂಗಡಿಯಲ್ಲಿ ಈ ಔಷಧಿ ಇಲ್ಲದಿದ್ದ ಕಾರಣ, ಚೀಟಿಯಲ್ಲಿ ನಮೂದಿಸಿದ್ದ ಗುಳಿಗೆಯ ಬದಲಾಗಿ ಎಪಿಥ್ರಿಲ್ ಗುಳಿಗೆ ನೀಡಲಾಗಿತ್ತು"

ಊಹಿಸಲೂ ಸಾಧ್ಯವಿಲ್ಲದಷ್ಟು ಭೀಭತ್ಸ ಕೃತ್ಯ 

ಸಾಮಾನ್ಯವಾಗಿ ಮನೆಯ ಹಿಂದಿನ ಕಾಡಿಗೆ ಕುದುರೆ ಮೇಯಿಸಲು ಬರುವ ಬಾಲಕಿಯನ್ನು ಅಪಹರಿಸುವಂತೆ ಅದೇ ದಿನ ರಾಮ್ ತನ್ನ ಅಳಿಯನಿಗೆ ಸೂಚಿಸಿದ್ದಾನೆ. ಇದಾದ ಬಳಿಕ ಬಾಲಾಪರಾಧಿ, ರಾಮ್ ಹಾಗೂ ಖಜೂರಿಯಾ ಅವರ ಯೋಜನೆ ಕಾರ್ಯಗತಗೊಳಿಸಲು ಪರ್ವೇಶ್ ಕುಮಾರ್ ಹಾಗೂ ಸ್ನೇಹಿತ ಮನ್ನು ಎಂಬವರ ಸಹಾಯ ಪಡೆದಿದ್ದಾನೆ. ಜನವರಿ 10ರಂದು ಬಾಲಕಿ ತನ್ನ ಕುದುರೆಯ ಬಗ್ಗೆ ಕೇಳುತ್ತಿದ್ದುದನ್ನು ಬಾಲಾಪರಾಧಿ ನೋಡಿದ್ದಾನೆ. ಆ ಕುದುರೆಗಳನ್ನು ತಾನು ನೋಡಿದ್ದಾಗಿ ತಿಳಿಸಿ, ಆಕೆಯನ್ನು ಕಾಡಿಗೆ ಕರೆದೊಯ್ದಿದ್ದಾನೆ. ಆರೋಪಿ ಮನ್ನುವನ್ನು ಕೂಡಾ ಕರೆದೊಯ್ದಿದ್ದ. ಅಪಾಯದ ಮುನ್ಸೂಚನೆ ಅರಿತ ಬಾಲಕಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಬಾಲಾಪರಾಧಿ ಆಕೆಯ ಕತ್ತು ಹಿಡಿದು ಆಕೆಯ ಬಾಯಿಯನ್ನು ಒಂದು ಕೈಯಿಂದ ಮುಚ್ಚಿ, ನೆಲಕ್ಕೆ ಬೀಳಿಸಿದ್ದಾನೆ" ಎಂದು ಆರೋಪಪಟ್ಟಿ ಹೇಳಿದೆ.

"ಸಂತ್ರಸ್ತೆ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಆಗ ಕಾಡಿನಲ್ಲೇ ಬಾಲಾಪರಾಧಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಮನ್ನು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮೇಜಿನ ಅಡಿಯಲ್ಲಿ ಎರಡು ಪ್ಲಾಸ್ಟಿಕ್ ಚಾಪೆಯಲ್ಲಿ ಸುತ್ತಿಕೊಂಡು ಆಕೆಯನ್ನು ಬಳಿಕ ಒಂದು ದೇವಸ್ಥಾನಕ್ಕೆ ಕರೆತಂದಿದ್ದಾರೆ. ಮರುದಿನ ಬಾಲಕಿಯ ಪೋಷಕರು ದೇವಸ್ಥಾನಕ್ಕೆ ಬಂದು ನಾಪತ್ತೆಯಾದ ಬಾಲಕಿಯ ಚಲನ ವಲನಗಳ ಬಗ್ಗೆ ರಾಮ್ ಬಳಿ ವಿಚಾರಿಸಿದ್ದಾರೆ. ಆಕೆ ಬಹುಶಃ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ರಾಮ್ ಸಮಜಾಯಿಷಿ ನೀಡಿದ್ದ"

ಪ್ರಾರ್ಥನಾ ಮಂದಿರದಲ್ಲಿ ಬಾಲಕಿಯನ್ನು ಕೂಡಿ ಹಾಕಿ ಬೀಗ ಜಡಿಯಲಾಗಿತ್ತು. ಅದೇ ದಿನ ಖಜೂರಿಯಾ ಹಾಗೂ ಬಾಲಾಪರಾಧಿ ದೇವಸ್ಥಾನ ತೆರೆದು, ಬಾಲಕಿಗೆ ನಿದ್ದೆಮಾತ್ರೆಯನ್ನು ಆಕೆಯ ಬಾಯಿಗೆ ತುರುಕಿ ನೀರು ಕುಡಿಸಿದ್ದಾರೆ. ಜನವರಿ 11ರಂದು ಬಾಲಾಪರಾಧಿ ಮತ್ತೊಬ್ಬ ಆರೋಪಿ ವಿಶಾಲ್ ಜಂಗೋತ್ರಾಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಬಾಲಕಿಯ ಅಪಹರಣದ ಬಗ್ಗೆ ತಿಳಿಸಿದ್ದ. ಕಾಮತೃಷೆ ತೀರಿಸಿಕೊಳ್ಳಬೇಕಾದರೆ, ತಕ್ಷಣ ಮೀರಠ್‌ನಿಂದ ವಾಪಸ್ಸಾಗುವಂತೆ ಸೂಚಿಸಿದ್ದ. ಜನವರಿ 12ರಂದು ಬೆಳಿಗ್ಗೆ 6ಕ್ಕೆ ಜಂಗೋತ್ರಾ ರಸಾನ ತಲುಪಿದ್ದಾನೆ. 8.30ರ ಸುಮಾರಿಗೆ ಬಾಲಾಪರಾಧಿ ದೇವಸ್ಥಾನಕ್ಕೆ ಬಂದು, ಹಸಿವಿನಿಂದ ಪ್ರಜ್ಞಾಹೀನವಾಗಿದ್ದ ಬಾಲಕಿಗೆ ಮತ್ತೆ 3 ನಿದ್ರೆಮಾತ್ರೆಯನ್ನು ನೀಡಿದ್ದಾನೆ. ಈ ವೇಳೆಗೆ ಖಜೂರಿಯಾ ಸೇರಿದಂತೆ ಹೀರಾನಗರ ಪೊಲೀಸ್ ಠಾಣೆಯ ಪೊಲೀಸರು ಬಾಲಕಿಯ ಶೋಧ ಆರಂಭಿಸಿದ್ದಾರೆ. ಖಜೂರಿಯಾ, ಇಫ್ತಿಕಾನ್ ವಾನಿ ಎಂಬ ಅಧಿಕಾರಿಯ ಜತೆಗೆ ಸಾಂಜಿರಾಮ್‌ನ ಮನೆಗೂ ಬಂದಿದ್ದ. ನಿದ್ದೆಮಾತ್ರೆಯನ್ನು ಬಾಲಕಿಗೆ ಹೊತ್ತುಹೊತ್ತಿಗೆ ನೀಡುವಂತೆ ಖಜೂರಿಯಾ, ಬಾಲಾಪರಾಧಿಗೆ ಸಲಹೆ ಮಾಡಿದ್ದ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

ತನಿಖೆಯ ವೇಳೆ ರಾಮ್, ಆರೋಪಿ ಪೊಲೀಸ್ ಅಧಿಕಾರಿಗಳ ಜತೆ ಡೀಲ್ ಕುದುರಿಸಿದ್ದ. ಶೋಧ ತಂಡದಲ್ಲಿದ್ದ ಮುಖ್ಯಪೇದೆ ರಾಜ್, ಪೊಲೀಸರಿಗೆ ಲಂಚ ನೀಡುವಂತೆ ಕೇಳಿದ್ದಾನೆ. ಜನವರಿ 12ರಂದು ರಾಮ್ 1.5 ಲಕ್ಷ ರೂಪಾಯಿಗಳನ್ನು ಬಾಲಾಪರಾಧಿಯ ತಾಯಿಯ ಮೂಲಕ ರಾಜ್‌ಗೆ ನೀಡಿದ್ದಾನೆ. ಜನವರಿ 13ರಂದು ವಿಶಾಲ್ ಜಂಗೋತ್ರಾ, ಬಾಲಾಪರಾಧಿ ಹಾಗೂ ರಾಮ್ ದೇವಸ್ಥಾನಕ್ಕೆ ತೆರಳಿ ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಜಂಗೋತ್ರಾ ಅಲೆಮಾರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಬಾಲಾಪರಾಧಿ ಕೂಡಾ ಅತ್ಯಾಚಾರ ನಡೆಸಿದ್ದಾನೆ. ಕೆಲ ದಿನಗಳ ಕಾಲ ಬಾಲಕಿಯನ್ನು ಪ್ರಾರ್ಥನಾ ಮಂದಿರದಲ್ಲಿ ಇಟ್ಟುಕೊಂಡು ಬಳಿಕ, ಬಾಲಕಿಯನ್ನು ಕೊಂದು ಶವವನ್ನು ಅರಣ್ಯದಲ್ಲಿ ಎಸೆಯಲು ಇದು ಸಕಾಲ ಎಂದು ರಾಮ್ ಸೂಚಿಸಿದ್ದಾನೆ ಎಂದು ಆರೋಪಪಟ್ಟಿ ವಿವರ ನೀಡಿದೆ.

ಆರೋಪಿ ಮನ್ನು, ವಿಶಾಲ್ ಹಾಗೂ ಬಾಲಾಪರಾಧಿ, ದೇವಸ್ಥಾನದಿಂದ ಬಾಲಕಿಯನ್ನು ಪಕ್ಕದ ಚರಂಡಿಗೆ ಒಯ್ದಿದ್ದಾರೆ. ಆಗ ಖಜೂರಿಯಾ ತಾನೂ ಆಕೆಯನ್ನು ಕೊಲ್ಲುವ ಮುನ್ನ ಭೋಗಿಸಬೇಕು ಎಂದು ಕೇಳಿದ್ದಾನೆ ಎಂದು ಆರೋಪಿಸಲಾಗಿದೆ.

"ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಬರ್ಬರವಾಗಿ ಅತ್ಯಾಚಾರ ಎಸಗಿ ಆರೋಪಿ ಖಜೂರಿಯಾ ಆಕೆಯ ಕುತ್ತಿಗೆಯನ್ನು ತನ್ನ ಎಡಭಾಗದ ತೊಡೆಯಲ್ಲಿಟ್ಟುಕೊಂಡು, ಕುತ್ತಿಗೆಯ ಮೇಲೆ ಬಲ ಹಾಕಿ ಆಕೆಯನ್ನು ಕೊಲ್ಲುವ ಪ್ರಯತ್ನ ನಡೆಸಿದ್ದಾನೆ. ಕೊಲ್ಲಲು ಖಜೂರಿಯಾ ವಿಫಲವಾದಾಗ, ಬಾಲಾಪರಾಧಿ, ಆಕೆಯ ಬೆನ್ನ ಮೇಲೆ ಮೊಣಕಾಲೂರಿ ಕುತ್ತಿಗೆ ಮೇಲೆ ಬಲ ಪ್ರಯೋಗಿಸಿ ಸಾಯಿಸಿದ್ದಾನೆ. ಬಳಿಕ ಸಂತ್ರಸ್ತೆ ಸತ್ತಿದ್ದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕಲ್ಲಿನಿಂದ ತಲೆ ಜಜ್ಜಿದ್ದಾನೆ"

ಶವವನ್ನು ಸಾಗಿಸಲು ವಾಹನ ಸಿಗದ ಹಿನ್ನೆಲೆಯಲ್ಲಿ ಪ್ರಾರ್ಥನಾ ಮಂದಿರದ ಒಳಗೆ ಬಚ್ಚಿಡಲಾಗಿತ್ತು. ಜನವರಿ 15ರಂದು ರಾಮ್, ಈ ಶವವನ್ನು ಕಾಡಿನಲ್ಲಿ ಎಸೆಯುವಂತೆ ಸೂಚಿಸಿದ್ದ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News