ಸಂತ್ರಸ್ತೆಯ ತಂದೆಯ ಶವದ ಅಂತ್ಯಸಂಸ್ಕಾರ ನಡೆದಿರದಿದ್ದರೆ ಕಾದಿಡಲು ಹೈಕೋರ್ಟ್ ಆದೇಶ

Update: 2018-04-11 16:08 GMT

ಅಲಹಾಬಾದ್,ಎ.11: ಉನ್ನಾವೊ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಂದೆಯ ಶವದ ಅಂತ್ಯಸಂಸ್ಕಾರವು ಈಗಾಗಲೇ ನಡೆದಿರದಿದ್ದರೆ ಅದನ್ನು ನೆರವೇರಿಸದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಬುಧವಾರ ಆದೇಶಿಸಿದೆ.

ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್, ಅವರ ಸೋದರ ಮತ್ತು ಸಹಚರರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆಂದು 18ರ ಯುವತಿ ಆರೋಪಿಸಿದ್ದು, ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಆತ್ಮಾಹುತಿಗೆ ಯತ್ನಿಸಿ ಜೈಲು ಸೇರಿದ್ದ ಆಕೆಯ ತಂದೆ ಮಂಗಳವಾರ ಅಲ್ಲಿಯೇ ಸಾವನ್ನಪ್ಪಿದ್ದರು.

ಘಟನೆಯನ್ನು ವಿವರಿಸಿ ಹಿರಿಯ ನ್ಯಾಯವಾದಿ ಗೊಪಾಲ ಸ್ವರೂಪ್ ಚತುರ್ವೇದಿ ಅವರು ನ್ಯಾಯಾಲಯಕ್ಕೆ ಬರೆದಿರುವ ಪತ್ರದ ಹಿನ್ನೆಲೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡಿರುವ ಮುಖ್ಯ ನ್ಯಾಯಮೂರ್ತಿ ಡಿ.ಬಿ.ಭೋಸಲೆ ಮತ್ತು ನ್ಯಾ.ಸುನೀತ ಕುಮಾರ ಅವರ ಪೀಠವು ಈ ಆದೇಶವನ್ನು ಹೊರಡಿಸಿತು.

ಸಾಮೂಹಿಕ ಅತ್ಯಾಚಾರ ಮತ್ತು ಸಂತ್ರಸ್ತೆಯ ತಂದೆಯ ಸಾವಿನ ಕುರಿತು ನ್ಯಾಯಪರವಾದ ತನಿಖೆಗೂ ಚತುರ್ವೇದಿ ಆಗ್ರಹಿಸಿದ್ದಾರೆ.

ಪ್ರಕರಣದ ಕುರಿತು ತನ್ನ ನಿಲುವನ್ನು ತಿಳಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿರುವ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಗುರುವಾರ ನಿಗದಿಗೊಳಿಸಿದೆ.

ಪ್ರಕರಣದ ಬಗ್ಗೆ ಮತ್ತು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ವಿವರಿಸಲು ಅಡ್ವೊಕೇಟ್ ಜನರಲ್ ಅಥವಾ ಹೆಚ್ಚುವರಿ ಅಡ್ವೊಕೇಟ್ ಜನರಲ್ ಉಪಸ್ಥಿತರಿರುವಂತೆ ಅದು ಸೂಚಿಸಿದೆ.

ಸಂತ್ರಸ್ತ ಮಹಿಳೆಯ ತಂದೆಯ ಅಂತ್ಯಸಂಸ್ಕಾರವನ್ನು ನಡೆಸಲಾಗಿದೆಯೇ ಎನ್ನುವದು ಸ್ಪಷ್ಟವಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಸೆಂಗರ್ ಸೋದರ ಅತುಲ್ ಸಿಂಗ್‌ನನ್ನು ಬಂಧಿಸಿದ್ದರು.

 ಈ ಪ್ರಕರಣದ ಸಿಬಿಐ ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಮುಂದಿನ ವಾರ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News