ಕುಂದಾಪುರ ತಾಪಂ ಇಂಜಿನಿಯರ್ ಲಾಕರ್‌ನಲ್ಲಿ 18.17 ಲಕ್ಷ ರೂ. ನಗದು, 1.113 ಕೆ.ಜಿ. ಚಿನ್ನ ಪತ್ತೆ
ಉಡುಪಿ, ಎ.11: ಕುಂದಾಪುರ ತಾಲೂಕು ಪಂಚಾಯತ್ ಜೂನಿಯರ್ ಇಂಜಿನಿಯರ್ ರವಿಶಂಕರ್ ಅವರ ಕುಂದಾಪುರದಲ್ಲಿರುವ ಮನೆಯ ಮೇಲೆ ಮಂಗಳವಾರ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ ತಂಡ ಇಂದು ಕೂಡ ತಪಾಸಣೆಯನ್ನು ಮುಂದುವರಿಸಿದೆ. ಈ ವೇಳೆ ರವಿಶಂಕರ್ ಅವರ ಬ್ಯಾಂಕ್ ಲಾಕರ್‌ನಲ್ಲಿ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ.
ಎಸಿಬಿ ಪಶ್ಚಿಮ ವಲಯ ಎಸ್ಪಿ ಶ್ರುತಿ ನೇತೃತ್ವದಲ್ಲಿ ಕುಂದಾಪುರದಲ್ಲಿರುವ ಬ್ಯಾಂಕಿನಲ್ಲಿ ರವಿಶಂಕರ್ ಅವರ ಖಾತೆ ಹಾಗೂ ಲಾಕರ್‌ನ್ನು ಪರಿಶೀಲಿಸಿದಾಗ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣಗಳು ದೊರೆತಿವೆ. ರವಿಶಂಕರ್ ಅವರ ಮನೆಯಲ್ಲಿ (50 ಸಾವಿರ ರೂ. ನಗದು) ಹಾಗೂ ಬ್ಯಾಂಕ್ ಲಾಕರ್ ನಲ್ಲಿ ಒಟ್ಟು 18,17,141 ರೂ. ನಗದು ಹಾಗೂ ಮನೆ (244ಗ್ರಾಂ ಚಿನ್ನಾಭರಣ) ಹಾಗೂ ಲಾಕರ್‌ನಲ್ಲಿ ಒಟ್ಟು 1.113 ಕೆ.ಜಿ. ಚಿನ್ನಾಭರಣಗಳು ಪತ್ತೆಯಾಗಿವೆ.
ಅದೇ ರೀತಿ ಕುಂಭಾಶಿ ಹಾಗೂ ಕಾಳಾವರದಲ್ಲಿ ರವಿಶಂಕರ್‌ಗೆ ಸಂಬಂಧಿಸಿದ ಐದು ನಿವೇಶನಗಳು ಮತ್ತು ಒಂದು ಬಂಗಲೆ ಸೇರಿದಂತೆ ಒಟ್ಟು ಮೂರು ಮನೆಗಳ ದಾಖಲೆಗಳು ದೊರೆತಿವೆ. ನಿನ್ನೆ ಮನೆಯ ಮೇಲೆ ದಾಳಿ ನಡೆಸಿದ್ದ ಎಸಿಬಿ ತಂಡ ನಿವೇಶನ ಹಾಗೂ ಮನೆಗಳ ದಾಖಲೆಗಳ್ನು ಪರಿಶೀಲಿಸಿ ವಶ ಪಡಿಸಿಕೊಂಡಿತ್ತು.
ಈ ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿಗಳಾದ ಉಡುಪಿಯ ದಿನಕರ್ ಶೆಟ್ಟಿ, ಮಂಗಳೂರಿನ ಸುಧೀರ್ ಹೆಗ್ಡೆ, ನಿರೀಕ್ಷಕರಾದ ಜಯರಾಮ ಡಿ.ಗೌಡ, ಸತೀಶ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.